ಮಂಗಳೂರು, ಜೂ 28 (Daijiworld News/MSP): ಕರಾವಳಿಯಲ್ಲಿ ಶಾಂತಿ ಕದಡಲು ಕಾರಣವಾಗುತ್ತಿರುವ ಜಾನುವಾರು ಕಳ್ಳತನವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ದಂಧೆ ಕೋರರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
" ದನ ಕಳ್ಳತನದಲ್ಲಿ ಭಾಗಿಗಳಾಗಿ ಭೂಗತಗೊಂಡಿರುವ ಕುಖ್ಯಾತ ಕುಟ್ಟಿ ಇಮ್ರಾನ್, ಬಷೀರ್ , ಅನ್ಸರ್ ಮುಂತಾದವರನ್ನು ಪತ್ತೆ ಹಚ್ಚಿ ಬಂಧಿಸಲು ವಿಶೇಷ ದಳವನ್ನು ನಿಯೋಜಿಸುವ ಮೂಲಕ ಜಾನುವಾರು ದಂಧೆಕೋರ ವಿರುದ್ದ ಸಮರ ಸಾರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಡಾ. ಸಂದೀಪ್ ಪಾಟೀಲ್ " ಹಳೆಯ ಗೋಕಳ್ಳತನದಲ್ಲಿ ಭಾಗಿಗಳಾಗಿದ್ದ ಅಪರಾಧಿಗಳ ಮೇಲೆ ಕಣ್ಗಾವಲು ಇರಿಸಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ಹಿಂದೆ ಜಾನುವಾರು ಕಳ್ಳತನದಲ್ಲಿ ಭಾಗಿಗಳಾಗಿದ್ದ ಅಪರಾಧಿಗಳ ವಿರುದ್ದ ಪ್ರತಿಬಂಧಕ ಕ್ರಮ ತೆಗೆದುಕೊಳ್ಳಲಾಗುವುದು . ಇದರೊಂದಿಗೆ ದಂಧೆಕೋರರನ್ನು ಮಟ್ಟ ಹಾಕಲು ಎಲ್ಲಾ ಪೊಲೀಸ್ ಠಾಣೆಗಳಲ್ಲೂ ನೈಟ್ಸ್ ಬೀಟ್ಸ್ ಹೆಚ್ಚಳ, ಹಳೆಯ ಅಪರಾಧಿಗಳ ಮನೆ ಮೇಲೆ ಧಿಡೀರ್ ದಾಳಿ ನಡೆಸಿ , ಅವರ ಚಟುವಟಿಕೆಗಳ ಪರಿಶೀಲನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
" ಈ ದಂಧೆಯಲ್ಲಿ ಭಾಗಿಗಳಾದ ಅಪರಾಧಿಗಳನ್ನು ಗಮನಿಸಿದಾಗ ಅವರಲ್ಲಿ ಹೆಚ್ಚಿನವರು, ಮಂಗಳೂರು ನಗರ, ಜಿಲ್ಲೆಯ ಗ್ರಾಮೀಣ ಪ್ರದೇಶ, ಉಡುಪಿ ಜಿಲ್ಲೆ ಮತ್ತು ಕಾಸರಗೋಡಿನ ಕೆಲವು ಪ್ರದೇಶಗಳಿಂದ ಬಂದವರಾಗಿದ್ದು, ಈ ಹಿನ್ನಲೆಯಲ್ಲಿ ತಮ್ಮ ಪ್ರದೇಶಗಳಲ್ಲಿ ಹಳೆಯ ಅಪರಾಧಿಗಳ ಮೇಲೆ ಹೆಚ್ಚಿನ ನಿಗಾ ಇರಿಸಲು ಸಂಬಂಧಪಟ್ಟ ಎಸ್.ಪಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.