ಬಂಟ್ವಾಳ, ಜೂ28(Daijiworld News/SS): ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರ " ಗ್ರಾಮದ ಕಡೆ ಶಾಸಕರ ನಡೆ" ಗ್ರಾಮ ಸ್ಪಂದನ ಕಾರ್ಯಕ್ರಮಕ್ಕೆ ಮಂಚಿ ಗ್ರಾಮ ಪಂಚಾಯತ್'ನಲ್ಲಿ ಚಾಲನೆ ನೀಡಲಾಯಿತು.
ಗ್ರಾಮದ ಬಹುತೇಕ ಸಮಸ್ಯೆಗಳನ್ನು ಹಂತ ಹಂತವಾಗಿ ಆಧ್ಯತೆಯ ನೆಲೆಯಲ್ಲಿ ಪರಿಹಾರ ಮಾಡುವ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆಯನ್ನು ಶಾಸಕ ರಾಜೇಶ್ ನಾಯಕ್ ನೀಡಿದರು.
ಆರಂಭದಲ್ಲಿ ರಾಜ ಧರ್ಮ ಪಾಲಿಸುತ್ತೇನೆ ಎಂದು ಹೇಳಿದ್ದೇನೆ. ಅದೇ ರೀತಿ ಕ್ಷೇತ್ರದ ಜನರಿಗೆ ಅನ್ಯಾಯವಾಗದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಸರಕಾರದಿಂದ ಸಿಗುವ ಸೌಲ್ಯಭ್ಯಗಳಿಂದ ಜನರು ವಂಚಿತರಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಮಂಚಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 90 ಲಕ್ಷ ಅನುದಾನದಲ್ಲಿ ವಿವಿಧ ಕಾಮಗಾರಿಗಳು ನಡೆಯುತ್ತಿದೆ. ಸ್ಮಶಾನ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಉದ್ಘಾಟನೆಯ ವೇಳೆ ರಸ್ತೆಯ ಕಾಂಕ್ರೀಟ್ ಕೆಲಸ ತುರ್ತಾಗಿ ಮಾಡಿಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. 57 ರಸ್ತೆಗಳ ಅಭಿವೃದ್ಧಿಯ ಬಗ್ಗೆ ಅರ್ಜಿಗಳು ಬಂದಿವೆ. ಎಲ್ಲಾ ರಸ್ತೆಗಳ ಅಭಿವೃದ್ಧಿಗಾಗಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಎಲ್ಲಾ ಮನೆ ಮನೆಗಳಲ್ಲಿ ಮಳೆ ಕೊಯ್ಲು ಅಳವಡಿಸುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದು, ತಾಲೂಕಿನಲ್ಲಿ ಮಾಹಿತಿ ಕಾರ್ಯಗಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಬೋರ್'ವೆಲ್, ಮಳೆ ಕೊಯ್ಲು ಹೀಗೆ ಅನೇಕ ರೀತಿಯಲ್ಲಿ ನೀರನ್ನು ಇಂಗಿಸುವ ಹಾಗೂ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಬರದಂತೆ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳವ ಯೋಚನೆ ಮಾಡಿದ್ದೇವೆ ಎಂದು ಹೇಳಿದರು.