ಬೆಳ್ತಂಗಡಿ, ಜೂ 28 (Daijiworld News/MSP): ತಾಲೂಕಿನ ಜನಸಂದಣಿ ಇರುವ ಗ್ರಾಮಗಳ ಪೈಕಿ ಬಡಗಕಾರಂದೂರು ಗ್ರಾಮವೂ ಒಂದು. ಐತಿಹಾಸಿಕ ಅಳದಂಗಡಿ ಎಂಬ ಊರು ಇರುವುದೂ ಇದೇ ಗ್ರಾಮದಲ್ಲಿ. ಇಲ್ಲಿರುವ ವಿಶಾಲವಾದ ಆನೆಮಹಲ್ ಅಥವಾ ಅಳದಂಗಡಿ ಪೇಟೆ ವಾಣಿಜ್ಯ ಚಟುವಟಿಕೆಗಳ ಕೇಂದ್ರ. ಸುತ್ತಲಿನ ಸುಮಾರು ಏಳೆಂಟು ಗ್ರಾಮಗಳ ನಾಗರಿಕರು ಕೃಷಿ ಉತ್ಪನ್ನಗಳ ಕೊಡು ಕೊಳ್ಳುವಿಕೆಗಾಗಿ ಇಲ್ಲಿಗೇ ಬರುತ್ತಾರೆ. ಹೀಗಾಗಿ ಈ ಪೇಟೆ ಹಗಲೀಡಿ ಚಟುವಟಿಕೆಯಿಂದ ಇರುತ್ತದೆ.
ಈ ಪೇಟೆಯ ಮೂಲಕ ಬೆಳ್ತಂಗಡಿಯಿಂದ ಕಾರ್ಕಳದವರೆಗಿನ ರಾಜ್ಯ ಹೆದ್ದಾರಿಯೂ ಹಾದು ಹೋಗುತ್ತದೆ. ಖಾಸಗಿ ಬಸ್ಸುಗಳು ದಿನಂಪ್ರತಿ ಸುಮಾರು ಎಂಭತ್ತಕ್ಕೂ ಹೆಚ್ಚು ಟ್ರಿಪ್ಗಳನ್ನು ಮಾಡುತ್ತಿವೆ. ಎರಡು ತಾಲೂಕು ಕೇಂದ್ರಗಳನ್ನು ಜೋಡಿಸುವ ಈ ರಾಜ್ಯ ಹೆದ್ದಾರಿಗೆ ಈಗಾಗಲೇ ಎರಡು ಸುವ್ಯವಸ್ಥಿತ ಬಸ್ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಕಾರ್ಕಳಕ್ಕೆ ಹೋಗುವವರಿಗೆ ಒಂದೆಡೆಯಾದರೆ ಗುರುವಾಯನಕೆರೆ-ಬೆಳ್ತಂಗಡಿಗೆ ಹೋಗುವವರಿಗೆ ಇನ್ನೊಂದೆಡೆ.
ಇಂತಿಪ್ಪ ವ್ಯವಸ್ಥೆ ಇರುವಾಗ ಮೂರನೇ ಬಸ್ನಿಲ್ದಾಣವೊಂದು ಅಳದಂಗಡಿ ಪೇಟೆಯ ಮಧ್ಯೆ ತಲೆಎತ್ತುತ್ತಿರುವುದು ಸಾರ್ವಜನಿಕರಲ್ಲಿ ಸೋಜಿಗವನ್ನುಂಟು ಮಾಡುತ್ತಿದೆ. ಕಳೆದ ವಾರದಿಂದೀಚೆಗೆ ಬಸ್ನಿಲ್ದಾಣಕ್ಕಾಗಿ ಪಂಚಾಂಗ ಹಾಕಲಾಗಿದೆ. ಎರಡು ನಿಲ್ದಾಣಗಳು ಇರುವಾಗ ಮೂರನೆಯದ್ದು ಯಾವ ಬಸ್ಗಳಿಗಾಗಿ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆಮಾಡಿದೆಯಲ್ಲದೆ ಹಾಸ್ಯಕ್ಕೂ ಕಾರಣವಾಗಿದೆ. ಸರಕಾರದ ಹಣ ಪೋಲು ಮಾಡುವ ಇದೊಂದು ಹೊಸ ವಿಧಾನವಿರಬಹುದು, ಮೂರನೇ ಬಸ್ನಿಲ್ದಾಣದೊಂದಿಗೆ ಸರಕಾರಕ್ಕೆ ಮೂರು ನಾಮ ಹಾಕಲಾಗುತ್ತಿದೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟವರಲ್ಲಿ ವಿಚಾರಿಸಿದಾಗ ಇದು ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅನುಕೂಲ ಮಾಡಿಕೊಡಲು ಬಸ್ನಿಲ್ದಾಣವನ್ನು ನಿರ್ಮಿಸುವ ಯೋಚನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇದು ಹೌದಾಗಿದ್ದರೂ ಈಗಾಗಲೇ ಇರುವ ಎರಡು ಬಸ್ನಿಲ್ದಾಣಗಳ ಪಕ್ಕದಲ್ಲಿ ಅಂಗಡಿಯನ್ನು ನಿರ್ಮಿಸಬಹುದಲ್ಲವೇ ಎಂಬ ಪ್ರಶ್ನೆಗೆ ಮೌನವೇ ಉತ್ತರವಾಗಿದೆ.
ಇಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಹಲವಾರು ಅಪಘಾತಗಳಾಗಿವೆ. ಹಲವಾರು ಮೃತ್ಯುವಿನ ವಶವಾದ ಘಟನೆಯೂ ನಡೆದಿದೆ. ಈಗಲೂ ಸಣ್ಣಪುಟ್ಟ ಅಪಘಾತಗಳು ನಡೆಯುತ್ತಿರುತ್ತವೆ. ಹೀಗಿರುವಾಗ ಸನಿಹದ ಕರ್ನಾಟಕ ಬ್ಯಾಂಕಿನಿಂದ ಪೆಟ್ರೋಲ್ ಪಂಪ್ನವರೆಗೆ ದ್ವಿಪಥ ರಸ್ತೆಯನ್ನು ನಿರ್ಮಿಸಿ ಮಧ್ಯದಲ್ಲೊಂದೇ ಬಸ್ನಿಲ್ದಾಣ ನಿರ್ಮಿಸಿದರೆ ಹೆಚ್ಚು ಅನುಕೂಲ. ಇದರಿಂದ ಅಪಘಾತಗಳನ್ನೂ ತಪ್ಪಿಸಬಹುದಾಗಿದೆ ಎನ್ನುವ ಅಭಿಪ್ರಾಯ ಹಲವರದ್ದು.
ಈಗಾಲೇ ಇರುವ ಬಸ್ನಿಲ್ದಾಣವೊಂದು ಮದ್ಯವ್ಯಸನಿಗಳಿಗೆ ಉತ್ತಮ ವಿಶ್ರಾಂತಿ ತಾಣವಾಗಿ ಹೋಗಿದೆ. ಇನ್ನು ಹೊಸತು ಕೂಡ ಅವರಿಗೆ ಮೀಸಲಾಗಲಿದೆ ಎನ್ನುತ್ತಾರೆ ಪೇಟೆಯಲ್ಲಿನ ವ್ಯಾಪಾರಿಗಳು. ಯಾರನ್ನೋ ಮೆಚ್ಚಿಸಲು ಮತ್ತು ಬಂಡವಾಳ ಶಾಹಿಗಳನ್ನು ಸಲಹಲು ಹೊಸ ನಿಲ್ದಾಣದ ಕಾಮಗಾರಿ ಮಾಡುತ್ತಿರುವುದು ಮೇಲ್ನೊಟಕ್ಕೆ ಗೋಚರವಾಗುತ್ತಿದೆ. ತಾಲೂಕಿನ ಶಿಸ್ತಿನ ಅಧಿಕಾರಿಯೆಂದೇ ಹೆಸರುವಾಸಿಯಾಗಿರುವ ತಹಸೀಲ್ದಾರರು ಈ ಕಡೆಗೊಮ್ಮೆ ಗಮನ ಹರಿಸಿ ಒಂದೂರಿಗೆ ಮೂರು ಬಸ್ನಿಲ್ದಾಣದ ಅವಶ್ಯಕತೆ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಬೇಕಾಗಿದೆ.
ಹೊಸ ಬಸ್ನಿಲ್ದಾಣದ ಮಾಹಿತಿಯೇ ಇಲ್ಲ. ಮೊದಲಿಗೆ ಇದು ಸರಕು ಸಾಗಾಟದ ವಾಹನಗಳಿಗಾಗಿ ಶೆಲ್ಪರ್ ನಿರ್ಮಿಸುತ್ತಿದ್ದಾರೆ ಎಂದು ಅಂದು ಕೊಂಡಿದ್ದೆ. ಆದರೆ ಇದೀಗ ಬಸ್ನಿಲ್ದಾಣವೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಇನ್ನೊರ್ವ ಪಂ.ಸದಸ್ಯರನ್ನು ಸಂಪರ್ಕಿಸುವುದು ಒಳ್ಳೆಯದು ಎಂದು ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್ ಮಿತ್ತಮಾರು ಪ್ರತಿಕ್ರಿಯಿಸಿದ್ದಾರೆ.
ಅಳದಂಗಡಿಗೆ ನಿತ್ಯ ಸಾವಿರಾರು ಮಂದಿ ಬರುತ್ತಾರೆ ಹೋಗುತ್ತಾರೆ. ಹೀಗಿರುವಾಗ ಇಲ್ಲಿ ಸುಸಜ್ಜಿತ ಶೌಚಾಲಯದ ಅಗತ್ಯವಿದೆ. ಇರುವ ಪಂ. ಶೌಚಾಲಯ ದೂರದಲ್ಲಿದ್ದು ಅದನ್ನು ಉಪಯೋಗಿಸುವ ಸ್ಥಿತಿಯಲ್ಲಿ ಇಲ್ಲ. ಅಲ್ಲದೆ ವಿದ್ಯುತ್ ಲೈನ್ ಹಾದು ಹೋಗುವ ಕೆಳಗಡೆಯೇ ಬಸ್ನಿಲ್ದಾಣ ನಿರ್ಮಿಸುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆಯೇ ಎಂದು ನಾಗರಿಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.