Karavali
ಕುಂದಾಪುರ: ಬಿದ್ಕಲ್ಕಟ್ಟೆಯ ವಿಶಿಷ್ಠ ಸರ್ಕಾರಿ ಶಾಲೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಖಾಸಗಿ ಶಾಲೆಯ ಮಕ್ಕಳು
- Fri, Jun 28 2019 04:26:35 PM
-
ಕುಂದಾಪುರ, ಜೂ 28 (Daijiworld News/MSP): ವಿನೂತನ ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಸಮುದಾಯದ ವಿಶ್ವಾಸವನ್ನು ಗಳಿಸಿ, ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿರುವ ಸರಕಾರಿ ಶಾಲೆಗಳ ಪೈಕಿ ಜಿಲ್ಲೆಯ ಗ್ರಾಮೀಣ ಶಾಲೆಗಳಲ್ಲಿ ಒಂದಾದ ಕುಂದಾಪುರ ವಲಯದ ಬಿದ್ಕಲ್ಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ವರ್ಷ 159 ಹೊಸ ದಾಖಲಾತಿಯೊಂದಿಗೆ ಕ್ರಾಂತಿ ಮಾಡಿದೆ. ಮತ್ತೊಂದು ಹೆಗ್ಗಳಿಕೆಯೆಂದರೆ ಸರ್ಕಾರದಿಂದ 1ನೇ ತರಗತಿಗೆ ಆಂಗ್ಲ ಮಾಧ್ಯಮದ ಮಾನ್ಯತೆ, ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿಯೂ ಪರಿವರ್ತನೆಗೊಂಡಿದೆ.
ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ 1000 ಶಾಲೆಗಳನ್ನು ಆಂಗ್ಲ ಮಾಧ್ಯಮವಾಗಿ ರೂಪಿಸುವ ಶಾಲೆಗಳಲ್ಲಿ ಅವಕಾಶ ಪಡೆದಿರುವ ಈ ಶಾಲೆಗೆ ಈಗಾಗಲೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿಯೂ ಆಯ್ಕೆಯಾಗಿ, ಕಾರ್ಯಾರಂಭವಾಗಿದೆ. ಈ ಎರಡು ಹೆಗ್ಗಳಿಕೆ, ವಿಶೇಷತೆಯ ಹೊರತಾಗಿಯೂ ಈ ಶಾಲೆಯ ಶೈಕ್ಷಣಿಕ ಗುಣಮಟ್ಟ, ವಿದ್ಯಾರ್ಥಿಸ್ನೇಹಿ ವಿನೂತನ ಕಾರ್ಯಕ್ರಮಗಳ ಆಯೋಜನೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಲೆ ಇರುವುದು ಗಮನಾರ್ಹ ಅಂಶ.
ಇಲ್ಲಿ 2016-17ನೇ ಸಾಲಿನಲ್ಲಿ 119 ಇದ್ದ ಮಕ್ಕಳ ಸಂಖ್ಯೆ 2018-19 ಕ್ಕೆ 175ಕ್ಕೆ ತಲುಪಿತ್ತು. ಈ ಶೈಕ್ಷಣಿಕ ವರ್ಷದಲ್ಲಿ 159 ವಿದ್ಯಾರ್ಥಿಗಳ ಹೊಸ ಸೇರ್ಪಡೆಯೊಂದಿಗೆ 301 ಕ್ಕೇರಿದೆ. ಪೂರ್ವ ಪ್ರಾಥಮಿಕ ವಿಭಾಗಕ್ಕೆ 61, 1ನೇ ತರಗತಿಯಲ್ಲಿ 47 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಕ್ರೀಯಾಶೀಲ ಶಾಲಾ ಹಳೆವಿದ್ಯಾರ್ಥಿ ಸಂಘ, ಉತ್ಸಾಹಿ ಎಸ್.ಡಿ.ಎಂ.ಸಿ ಹಾಗೂ ಸೇವಾಶೀಲ ಶಿಕ್ಷಕವರ್ಗದ ಶೈಕ್ಷಣಿಕ ಕಾಳಜಿ ಒಟ್ಟಾರೆ ಸಾಂಘಿಕ ಪ್ರಯತ್ನದ ಫಲ ಈ ಶಾಲೆ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿ ಮೂಡಿ ಬರುತ್ತಿರುವುದು.
ನಲಿಕಲಿ ಸರಕಾರಿ ಶಾಲೆಗಳಲ್ಲಿ ಮಾತ್ರ ಇರುವ ವಿಶೇಷ ಶಿಕ್ಷಣ ಪದ್ಧತಿಯಾಗಿದ್ದು ಸ್ವಕಲಿಕೆ, ಸ್ವವೇಗದ ಕಲಿಕೆ ಹಾಗೂ ಸಂತಸದಾಯಕ ಕಲಿಕೆಯನ್ನು ಇದು ಉತ್ತೇಜಿಸುತ್ತಿದೆ. ಇದಲ್ಲದೆ ಈ ಹಿಂದೆಯೇ 1ನೇ ತರಗತಿಯಿಂದಲೇ ಇಂಗ್ಲಿಷ್ ಕಲಿಕೆಗೆ ವಿಶೇಷ ಅವಕಾಶ ಕಲ್ಪಿಸಿತ್ತು. ಹಳೆವಿದ್ಯಾರ್ಥಿ ಸಂಘದ ಮುತುವರ್ಜಿಯಲ್ಲಿ ಇಲಾಖಾ ಅನುಮತಿಯೊಂದಿಗೆ 6,7ನೇ ತರಗತಿಗೆ ಉಚಿತ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ನೀಡಲಾಗುತ್ತಿದೆ. ಅನುಭವಿ ಬೋಧಕ ವೃಂದದಿಂದ ಚಟುವಟಿಕೆ ಆಧಾರಿತ ಶಿಕ್ಷಣ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ವಿಶೇಷ ಪೂರಕ ಬೋಧನೆ, ಲ್ಯಾಪ್ ಟಾಪ್, ಪ್ರಾಜೆಕ್ಟರ್, ಸಿ.ಡಿ.ಗಳ ಮೂಲಕ ತಂತ್ರಜ್ಞಾನಾಧಾರಿತ ಕಲಿಕೆಗೆ ವ್ಯಾಪಕ ಅವಕಾಶ, ಶಾಲಾ ಶ್ರದ್ಧಾ ವಾಚನಾಲಯ, ರೇಡಿಯೋ ಪಾಠದ ಮೂಲಕ ಕೇಳಿಕಲಿ ಚಿಣ್ಣರ ಚುಕ್ಕಿ ಚುಕ್ಕಿಚಿನ್ನಾ ಕಲಿಕಾ ಕಾರ್ಯಕ್ರಮ, ಪ್ರತಿದಿನ ಪ್ರಾರ್ಥನಾ ಅವಧಿಯಲ್ಲಿ ಚಿತ್ರ ಪ್ರದರ್ಶನ, ವಿಜ್ಞಾನ ಪ್ರಯೋಗ, ಪುಸ್ತಕ ಪರಿಚಯ, ವಾರ್ತಾ ವಾಚನ, ಸುಭಾಷಿತ, ಗಾದೆ, ಒಗಟು, ಕೈಬರಹ ಪ್ರದರ್ಶನ ಹೀಗೆ ಹತ್ತಾರು ವೈವಿಧ್ಯಪೂರ್ಣ ಕಲಿಕಾ ಪೂರಕ ಚಟುವಟಿಕೆಗಳೊಂದಿಗೆ ಶಾಲೆಗೆ ಬನ್ನಿ ಶನಿವಾರ, ಕಲಿಕೆಗೆ ನೀಡಿ ಸಹಕಾರ ಕಾರ್ಯಕ್ರಮದ ಮುಖೇನ ವಿವಿದ ಸಂಪನ್ಮೂಲ ವ್ಯಕ್ತಿಗಳನ್ನು ಕರೆದು ಅವರ ಸಾಧನೆ ಕುಶಲತೆಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತಿದೆ. ಇಕೋ ಕ್ಲಬ್, ವಿಜ್ಞಾನ ಕ್ಲಬ್, ಗ್ರಾಹಕ ಕ್ಲಬ್, ಮೀನಾ ಕ್ಲಬ್, ವಿದ್ಯಾರ್ಥಿ ಸಂಸತ್, ಸಾಹಿತ್ಯ ಸಂಘ ಮೊದಲಾದ ಪಠ್ಯಪೂರಕ ಚಟುವಟಿಕೆಗಳಿಗೂ ಅವಕಾಶವನ್ನು ಒದಗಿಸಲಾಗಿದೆ.
ಈ ಶಾಲೆಯಲ್ಲಿ 2015-16 ನೇ ಸಾಲಿನಿಂದ ಹಳೆವಿದ್ಯಾರ್ಥಿ ಸಂಘದ ಮುತುವರ್ಜಿಯಲ್ಲಿ ಇಲಾಖಾ ಅನುಮತಿ ಪಡೆದು, 6.7ನೇ ತರಗತಿಗೆ ಆಂಗ್ಲ ಮಾದ್ಯಮ ವಿಭಾಗವನ್ನು ಸೇರ್ಪಡೆಗೊಳಿಸಲಾಯಿತು. ಪ್ರಾರಂಭದಲ್ಲಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೋಧನೆ ಮಾಡಿ ಅನುಭವವಿರುವ ಪದವೀಧರ ಶಿಕ್ಷಕರನ್ನೇ 6,7ನೇ ತರಗತಿಯ ಆಂಗ್ಲ ಮಾಧ್ಯಮ ವಿಭಾಗ ಮತ್ತು 1 ನೇತರಗತಿಯಿಂದ ಇಂಗ್ಲಿಷ್ ವಿಷಯವನ್ನು ಬಲಪಡಿಸುವ ಉದ್ದೇಶದಿಂದ ನೇಮಿಸಿದ್ದರಿಂದ ಈ ಶಾಲಾ ಆಂಗ್ಲ ಮಾದ್ಯಮ ವಿಭಾಗ ಯಶಸ್ವಿಯಾಗಿದೆ.
ಎಲ್.ಕೆ.ಜಿ., ಯು.ಕೆಜಿ ತರಗತಿಗೆ ಕೊಠಡಿಯನ್ನು ಅತ್ಯಂತ ಆಕರ್ಷಣೀಯ, ಶಿಶುಸ್ನೇಹಿಯಾಗಿ ರೂಪಿಸಲಾಗಿದೆ. ಪೋಸ್ಟರ್ ಚಿತ್ರಗಳ ಬದಲು ಗೋಡೆಯಲ್ಲಿ ಕಲಾವಿದರ ಮೂಲಕ ಚಿತ್ರಗಳನ್ನು ಬಿಡಿಸಲಾಗಿದೆ. ಆಂಗ್ಲ ವರ್ಣಮಾಲೆಯಂತೆ ಚಿತ್ತಾರಗಳನ್ನು ಬಿಡಿಸಲಾಗಿದೆ.
ಮಗುವಿನ ಸಮಗ್ರ ಶೈಕ್ಷಣಿಕ ಬಲವರ್ಧನೆಗಾಗಿ ಮುತುವರ್ಜಿಯಿಂದ ಶ್ರಮಿಸುತ್ತಿರುವುದರಿಂದ ಸ್ಥಳೀಯ ಪರಿಸರವಲ್ಲದೆ, ದೂರದ ಗೋಳಿಯಂಗಡಿ, ಹಾಲಾಡಿ, ಬಳ್ಕೂರು, ಸಳ್ವಾಡಿ, ಕೇಸನಮಕ್ಕಿ, ಜಪ್ತಿ, ಮೊಳಹಳ್ಳಿ, ಕಕ್ಕುಂಜೆ, ಕೊರ್ಗಿ, ಶಂಕರನಾರಾಯಣ, ಹಳ್ಳಾಡಿ, ಶಿರಿಯಾರ ಮೊದಲಾದ ಪ್ರದೇಶಗಳಿಂದ ಮಕ್ಕಳು ಬರುತ್ತಾರೆ. ಈ ಶೈಕ್ಷಣಿಕ ವರ್ಷ ಬೇರೆ ಬೇರೆ ಖಾಸಗಿ ಶಾಲೆಯಿಂದ ೩೦ ಮಕ್ಕಳು ಈ ಸರ್ಕಾರಿ ಶಾಲೆಗೆ ಸ್ವ ಇಚ್ಛೆಯಿಂದ ಸೇರ್ಪಡೆಗೊಂಡಿದ್ದಾರೆ. ಅನೇಕರು 1,2,3,4,5ನೇ ತರಗತಿಗೂ ಆಂಗ್ಲ ಮಾಧ್ಯಮ ಶಾಲೆಗಳಿಂದ ಬಂದು ದಾಖಲಾಗಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಂದ ಬಂದು ದಾಖಲಾಗಿರುವ ವಿದ್ಯಾರ್ಥಿಗಳ ಪೋಷಕರು ಈ ಶಾಲೆಯ ಶಿಕ್ಷಣದ ಬಗ್ಗೆ ಸಂತೃಪ್ತಿ ಹೊಂದಿರುವುದರಿಂದ, ಆಂಗ್ಲ ಮಾಧ್ಯಮ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುತ್ತಿರುವ ಅನೇಕ ಪೋಷಕರು ತಮ್ಮ ಮಕ್ಕಳನ್ನು 6,7ನೇ ತರಗತಿಯ ಆಂಗ್ಲಮಾಧ್ಯಮ ವಿಭಾಗಕ್ಕೆ ಮತ್ತು ಜೊತೆಗೆ ಕಿರಿಯ ತರಗತಿಗಳಿಗೂ ಸೇರಿಸಲು ಸೀಟುಗಳನ್ನು ಕಾದಿರಿಸುತ್ತಿರುವುದು ಈ ಶಾಲಾ ಆಂಗ್ಲ ಮಾಧ್ಯಮ ವಿಭಾಗಕ್ಕೆ ಸಂದ ಮತ್ತು ಸಲ್ಲುತ್ತಿರುವ ಗೌರವ.
ಸಿವಿಲ್ ಇಂಜಿನಿಯರ್ ಪ್ರಶಾಂತ್ ಅವರ ನೇತೃತ್ವದ ಶಾಲಾ ಹಳೆವಿದ್ಯಾರ್ಥಿ ಸಂಘ ಮತ್ತು ಪೋಷಕ ಪ್ರತಿನಿಧಿ ಶಾಂತರಾಮ ನೇತೃತ್ವದ ಶಾಲಾ ಎಸ್.ಡಿ.ಎಂ.ಸಿ ಯ ಕಾರ್ಯವೈಖರಿ ಪ್ರಶಂಸನೀಯ. ಮುಖ್ಯೋಪಾಧ್ಯಾಯರಾಗಿ ನಾಗರತ್ನ, ದೈ.ಶಿ.ಶಿಕ್ಷಕರಾಗಿ ಉದಯ ಕುಮಾರ್ ಶೆಟ್ಟಿ, ಸಹಶಿಕ್ಷಕರಾಗಿ ಸತೀಶ ಶೆಟ್ಟಿಗಾರ್, ಚಿತ್ರಾ ಕುಮಾರಿ, ರಮಣಿ, ಜ್ಯೋತಿಲಕ್ಷ್ಮೀ, ಶ್ಯಾಮಲ, ಪುರುಷೋತ್ತಮ (ನಿಯೋಜನೆ),ಅವಕಾಶ ಫೌಂಢೇಷನ್ ಶಿಕ್ಷಕಿ ಪವಿತ್ರ ಹೆಗ್ಡೆ ಗೌರವ ಶಿಕ್ಷಕಿ ಭಾರತಿ ಪೂರ್ವ ಪ್ರಾಥಮಿಕ ವಿಭಾಗದಲ್ಲಿ ಶಿಕ್ಷಕರಾಗಿ ಸೌಮ್ಯ, ದೀಪಿಕಾ ವೀಣಾ ಸೇವೆ ಸಲ್ಲಿಸುತ್ತಿದ್ದಾರೆ.
ಮೊಳಹಳ್ಳಿ ದಿ.ಜಯರಾಮ ಹೆಗ್ಡೆ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ಮೊಳಹಳ್ಳಿ ದಿನೇಶ ಹೆಗ್ಡೆ ಅವರು ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ನೋಟ್ ಪುಸ್ತಕವನ್ನು ಕಳೆದ 10 ವರ್ಷಗಳಿಂದ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಪೋಷಕರ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಶಾಲಾ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಅವರ ಗಮನಕ್ಕೆ ತರುತ್ತಾ ಮಗುವಿನ ಕಲಿಕೆಯ ಬಗ್ಗೆ ಆಗಾಗ ಅವರೊಂದಿಗೆ ಚರ್ಚಿಸುತ್ತಿರುವುದರಿಂದ ಶಾಲಾ ಸಮಗ್ರ ಅಭಿವೃದ್ದಿ ಸಾಧ್ಯವಾಗುತ್ತಿದೆ. ಸರ್ಕಾರಿ ಶಾಲೆಗಳು ಹೀಗೆ ಸಾರ್ವಜನಿಕ ಸಹಭಾಗಿತ್ವದಿಂದ ಗತ ವೈಭವ ಮರುಕಳಿಸಿಕೊಳ್ಳಲು ಸಾಧ್ಯವಿದೆ ಎನ್ನುವುದಕ್ಕೆ ಬಿದ್ಕಲ್ಕಟ್ಟೆ ಶಾಲೆ ಉದಾಹರಣೆಯಾಗಿದೆ. ಇಲ್ಲಿನ ಬೆಳವಣಿಗೆ, ಸಾಧನೆಯ ಹಿಂದಿರುವ ದೂರಗಾಮಿ ಆಲೋಚನೆ, ಶಿಕ್ಷಣದ ತುಡಿತ, ಹೊಸ ಹೊಸ ಪರಿಕಲ್ಪನೆಗಳು ಎಲ್ಲಾ ಶಿಕ್ಷಕರಿಗೂ, ಶಿಕ್ಷಣಾಭಿಮಾನಿಗಳಿಗೂ ಮಾದರಿಯಾಗಿದೆ.
ತಿಂಗಳ ಕಲಿಕಾ ಪ್ರದರ್ಶನ, ಸರ್ವ ಪೋಷಕರ ಸಭೆ
ಶಿಕ್ಷಕರು ಹಾಗೂ ಪೋಷಕರ ನಡುವಿನ ಬಾಂಧವ್ಯವನ್ನು ಬಲಪಡಿಸಿ, ಮಕ್ಕಳ ಕಲಿಕೆಯ ಗುಣಮಟ್ಟವನ್ನು ಖಾತ್ರಿ ಪಡಿಸಿಕೊಳ್ಳುವ ಉದ್ದೇಶದೊಂದಿಗೆ, ಪ್ರತಿ ತಿಂಗಳೂ ಮಕ್ಕಳ ಕಲಿಕೆಯನ್ನು ಪೋಷಕರ ಮುಂದೆ ತೆರೆದಿಡುವ ದಿಟ್ಟ ಹೆಜ್ಜೆಯಾಗಿ ವಿಭಿನ್ನವಾದ ಶೈಕ್ಷಣಿಕ ಪ್ರಯೋಗವನ್ನು ಈ ಶಾಲೆಯಲ್ಲಿ 2017-18ನೇ ಸಾಲಿನಿಂದ ಪ್ರಾರಂಭಿಸಲಾಯಿತು. ಅದುವೇ ತಿಂಗಳ ಕಲಿಕಾ ಪ್ರದರ್ಶನ ಮತ್ತು ಸರ್ವಪೋಷಕರ ಸಭೆ. ಎಲ್ಲ ಶಿಕ್ಷಕರ ಒಗ್ಗಟ್ಟಿನ ಪ್ರತಿರೂಪವಾಗಿರುವ ಈ ಕಾರ್ಯಕ್ರಮ ಪೋಷಕರ ಹಾಗೂ ಸಮುದಾಯದ ಪ್ರಶಂಸೆಗೆ ಪಾತ್ರವಾಗಿದೆ.ಮಕ್ಕಳ ಅಭಿವ್ಯಕ್ತಿ ಸಾಮರ್ಥ್ಯವನ್ನು ಒರೆಗೆ ಹಚ್ಚಿ ಸಮುದಾಯದ ಮುಂದಿಡುವ ಉದ್ದೇಶದಿಂದ ಪ್ರತೀ ತಿಂಗಳೂ ಕಲಿಕಾ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ. ಮಕ್ಕಳು ಆಯಾಯ ತಿಂಗಳಲ್ಲಿ ತಾವು ಪಠ್ಯದಲ್ಲಿ ಕಲಿತ ವಿಚಾರಗಳನ್ನು ಕಥೆ, ಹಾಡು, ನಾಟಕ, ಸಂಭಾಷಣೆ, ಪ್ರಯೋಗ, ಚಿತ್ರ ಪ್ರದರ್ಶನಗಳ ಮೂಲಕ ಪೋಷಕರ ಮುಂದೆ ಪ್ರದರ್ಶಿಸುತ್ತಾರೆ. ಅಲ್ಲದೆ ಈ ಕಾರ್ಯಕ್ರಮದ ಮೂಲಕ ಪ್ರತಿ ತಿಂಗಳೂ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಶಾಲಾ ಶಿಕ್ಷಕರೊಂದಿಗೆ ಮುಕ್ತವಾಗಿ ಚರ್ಚಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಚಾರಣ ಸಾಹಿತ್ಯದೆಡೆಗೆ ಮಕ್ಕಳ ಮಾಸಿಕ ನಡಿಗೆ
ಮಕ್ಕಳ ಮನದ ಮಾತುಗಳೊಂದಿಗೆ ನಿರಂತರ ಸಾಹಿತ್ಯದ ನಡಿಗೆ ಶಾಲೆಯಿಂದ ಮನೆಗೊಂದು ಚಾರಣ ಪತ್ರಿಕೆಯನ್ನು 2017ರ ಜನವರಿ ತಿಂಗಳಿನಿಂದ ಶಾಲಾ ಸಹಶಿಕ್ಷಕರಾದ ಸತೀಶ ಶೆಟ್ಟಿಗಾರರ ಪ್ರಧಾನ ಸಂಪಾದಕತ್ವದಲ್ಲಿ ಪ್ರಾರಂಭಿಸಲಾಗಿದೆ. ಚಾರಣ ಅನಾವರಣ ಈ ಶಾಲೆಯ ವಿಶೇಷ ಕಲಿಕಾ ಉತ್ತೇಜಕ ಮತ್ತು ಸಾಹಿತ್ಯಕ ಕಾರ್ಯಕ್ರಮವಾಗಿದ್ದು ಪ್ರತಿ ತಿಂಗಳೂ ಸಮಾಜದ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡಿರುವ ಗಣ್ಯ ಅತಿಥಿಗಳ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಪ್ರತೀ ತಿಂಗಳೂ ಪೋಷಕರ ಉಪಸ್ಥಿತಿಯಲ್ಲಿ ಮಕ್ಕಳಿಗೆ ಗಣ್ಯರ ಅನುಭಾವದ ವಿಚಾರಧಾರೆಯನ್ನು ಕೇಳುವ ಸದವಕಾಶ ಇದಾಗಿದೆ.