ಉಡುಪಿ, ಜೂ 28 (Daijiworld News/MSP): ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಮಾಲಿನ್ಯವನ್ನು ನಿಯಂತ್ರಿಸಲು ಹಾಗೂ ತಡೆಗಟ್ಟುವ ಶಾಸನಬದ್ಧ ಜವಾಬ್ದಾರಿಯನ್ನು ಹೊಂದಿರುತ್ತದೆ. ರಾಜ್ಯದಲ್ಲಿ ಜಲ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಮಂಡಳಿಯು ಪಿಓಪಿಯಿಂದ ಮಾಡುವ ವಿಗ್ರಹಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜನೆ ಮಾಡುವುದನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿರುತ್ತದೆ. ರಾಜ್ಯದ ಉಚ್ಛ ನ್ಯಾಯಾಲಯವು ಮಂಡಳಿಯ ಅಧಿಸೂಚನೆಯನ್ನು ಕ್ರಮಬದ್ಧಗೊಳಿಸಿರುತ್ತದೆ.
ಇತ್ತೀಚೆಗೆ ಸಾರ್ವಜನಿಕರು ಆಚರಿಸುತ್ತಿರುವ ಹಬ್ಬ ಮತ್ತು ಇತರೆ ಸಮಾರಂಭಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ವಿಗ್ರಹಗಳನ್ನು ಮತ್ತು ಬಣ್ಣದ ವಿಗ್ರಹಗಳನ್ನು ಕೆರೆ ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜನೆಯನ್ನು ವ್ಯಾಪಕವಾಗಿ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಮಂಡಳಿಯು ಅಂತಹ ಜಲಮೂಲಗಳ ನೀರಿನ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದ್ದು, ವಿಶ್ಲೇಷಣಾ ವರದಿಗಳ ಪ್ರಕಾರ ಅಂತಹ ಜಲಮೂಲಗಳು ವಿಗ್ರಹಗಳ ವಿಸರ್ಜನೆಯಿಂದ ಮಾಲಿನ್ಯವಾಗುತ್ತಿರುವುದು ದೃಢಪಟ್ಟಿರುತ್ತದೆ.
ಈ ಜಲ ಮಾಲಿನ್ಯವು ವಿಗ್ರಹಗಳಲ್ಲಿ ಉಪಯೋಗಿಸಿದ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ಮತ್ತು ಬಳಸುವ ರಾಸಾಯನಿಕ ಬಣ್ಣಗಳಿಂದ ಆಗುತ್ತಿದ್ದು, ಇದರಿಂದ ಜಲಮೂಲಗಳ ಮೇಲೆ ಅವಲಂಬಿತವಾದ ಪಶು, ಪಕ್ಷಿ, ಪ್ರಾಣಿಗಳು ಮತ್ತು ಇತರೆ ಜಲಚರಗಳ ಜೀವಕ್ಕೆ ಅಪಾಯ ಉಂಟಾಗುವುದರಿಂದ ಹಾಗೂ ಪರಿಸರಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ದಕ್ಕೆಯಾಗುವುದರಿಂದ ಇಂತಹ ಕ್ರಿಯೆಗಳನ್ನು ತಡೆಯುವ ಸಲುವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಲ ಮಾಲಿನ್ಯ(ತಡೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಪ್ರಕಾರ ಕಲಂ 33(ಅ) ನಲ್ಲಿ ತಿಳಿಸಿರುವ ಪ್ರದತ್ತ ಅಧಿಕಾರವನ್ನು ಚಲಾಯಿಸಿ ರಾಜ್ಯದ ಕೆರೆಗಳಲ್ಲಿ ಹಾಗೂ ಇತರೇ ಯಾವುದೇ ಜಲ ಮೂಲಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ/ ಬಣ್ಣ ಲೇಪಿತವಾದಂತಹ ವಿಗ್ರಹಗಳನ್ನು ಜಲಗಳಲ್ಲಿ, ನದಿ, ಕಾಲುವೆ/ ಬಾವಿಗಳಲ್ಲಿ ವಿಸರ್ಜಿಸುವುದನ್ನು ಈ ಮೂಲಕ ನಿಷೇಧಿಸಿದ್ದು, ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ 1974 ರ ಕಲಂ 45-ಎ ಅನ್ವಯ ದಂಡವನ್ನು (10000 ರೂ. ವರೆಗೆ) ಮತ್ತು ಜೈಲುವಾಸವನ್ನು ವಿಧಿಸುವ ಅವಕಾಶವಿರುತ್ತದೆ.
ಆದುದರಿಂದ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣ ರಹಿತ ಗಣೇಶ ಮೂರ್ತಿಯೊಂದಿಗೆ ಹಬ್ಬ ಆಚರಿಸಿ, ನಂತರ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸುವ ಮೂಲಕ, ಪಿಒಪಿ ಗಣೇಶ ವಿಗ್ರಹಗಳ ಬಳಕೆ ಪ್ರಮಾಣವನ್ನು ಮತ್ತಷ್ಟು ಕಡಿಮೆ ಮಾಡಿ, ಶೂನ್ಯ ಪ್ರಮಾಣಕ್ಕೆ ಇಳಿಸುವಲ್ಲಿ ಸಹಕರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.