ಉಳ್ಳಾಲ, ಜೂ 28 (Daijiworld News/SM): ಸಮುದ್ರ ತೀರದಲ್ಲಿ ಉಳ್ಳಾಲ ನಗರಸಭೆ ನಿರ್ಮಿಸಿರುವ ತ್ಯಾಜ್ಯ ಶೇಖರಣಾ ಟ್ಯಾಂಕ್ ಅವ್ಯವಸ್ಥೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವಾರದಲ್ಲಿ ಸಮುದ್ರ ತೀರದಲ್ಲಿರುವ ಟ್ಯಾಂಕ್ ತೆರವುಗೊಳಿಸದೇ ಇದ್ದಲ್ಲಿ ಮೊಗವೀರಪಟ್ನದ ಯುವಕರೆಲ್ಲರೂ ಒಗ್ಗೂಡಿ ಉಗ್ರ ಹೋರಾಟದ ಜತೆಗೆ, ತಾವೇ ಟ್ಯಾಂಕ್ ತೆರವುಗೊಳಿಸುತ್ತೇವೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಳ್ಳಾಲದ ಧಾರ್ಮಿಕ ಕೇಂದ್ರಗಳು ಹಾಗೂ ಪ್ರವಾಸಿ ತಾಣದ ಸಮೀಪ ಅಕ್ರಮವಾಗಿ ಟ್ಯಾಂಕ್ ನಿರ್ಮಿಸುವ ಕಾಮಗಾರಿ ನಡೆದಿದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅಕ್ರಮದ ಕುರಿತು ಒಪ್ಪಿಕೊಂಡಿದ್ದು, ಸ್ಥಳಾಂತರಗೊಳಿಸುವ ಕುರಿತು ತಿಳಿಸಿದ್ದಾರೆ. ಆದರೆ ಈವರೆಗೂ ಅದು ಈಡೇರಿಲ್ಲ.
ಜೊತೆಗೆ ಅದೇ ಸ್ಥಳದಲ್ಲಿ ಕಸದ ವಿಲೇವಾರಿ ಮಾಡಲು ವಾಹನ ನಿಲ್ಲುತ್ತದೆ. ಪ್ರದೇಶವಿಡೀ ಕಸದ ರಾಶಿಯಿಂದ ತುಂಬಿಕೊಂಡಿದೆ. ಉಳ್ಳಾಲ ಪ್ರದೇಶದ ವಸತಿ ಕಟ್ಟಡ, ಅಂಗಡಿಗಳ ಮನೆಗಳಿಂದ ಬರುವ ಶೌಚಾಲಯ, ಸ್ನಾನಗೃಹ ತ್ಯಾಜ್ಯ ನೀರನ್ನು ಟ್ಯಾಂಕಿನಲ್ಲಿ ಶೇಖರಿಸಿಡಲಾಗುತ್ತಿದೆ. ಮಳೆಗಾಲದಲ್ಲಿ ಟ್ಯಾಂಕ್ ತುಂಬಿ ತ್ಯಾಜ್ಯ ನೀರಿಡಿ ರಸ್ತೆಯಲ್ಲಿ, ಮನೆಗಳ ಆವರಣದಲ್ಲಿ ಹರಿದು ಅನಾರೋಗ್ಯದ ವಾತಾವರಣ ನಿರ್ಮಾಣವಾಗಿದೆ.
ಪ್ರದೇಶದಾದ್ಯಂತ ಸೊಳ್ಳೆ ಕಾಟ ಹೆಚ್ಚಾಗಿದ್ದು, ಇಲ್ಲಿನ ಮನೆಮಂದಿಯಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಒಂದು ವಾರದ ಒಳಗೆ ಟ್ಯಾಂಕ್ ತೆರವುಗೊಳಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ. ಟ್ಯಾಂಕನ್ನು ತಾವಾಗಿಯೇ ತೆರವುಗೊಳಿಸುತ್ತೇವೆ, ಅನಾಹುತಗಳು ಸಂಭವಿಸಿದಲ್ಲಿ ಅಧಿಕಾರಿಗಳೇ ನೇರ ಹೊಣೆ ಎಂದು ಮೊಗವೀರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಉಳ್ಳಾಲ ನಗರಸಭೆ ಈ ಬಗ್ಗೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಿದ್ದು, ಇಲ್ಲಿನ ಜನತೆಯ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಾಗಿದೆ.