ಪುತ್ತೂರು, ಜೂ 28 (Daijiworld News/SM): ಚುನಾವಣೆಯಲ್ಲಿ ಗೆದ್ದು ಬಂದಿದ್ದರೂ ಅಧಿಕಾರ ನಡೆಸಲಾರದ ಸ್ಥಿತಿಯಲ್ಲಿ ರಾಜ್ಯದ ಹಲವು ಸ್ಥಳೀಯ ಸಂಸ್ಥೆಗಳಿವೆ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಮೀಸಲಾತಿ ಪ್ರಕಟಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಒಂದೆರಡು ಸ್ಥಳೀಯ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮವನ್ನು ಇದೀಗ ಎಲ್ಲಾ ಸ್ಥಳೀಯ ಸಂಸ್ಥೆಗಳು ಅನುಭವಿಸುವಂತಾಗಿದೆ. ಪುತ್ತೂರಿನ ನಗರ ಸಭೆಗೆ ಚುನಾವಣೆ ನಡೆದು ಮುಂಬರುವ ಅಗಸ್ಟ್ ತಿಂಗಳಿಗೆ ಒಂದು ವರ್ಷ ಪೂರೈಸುತ್ತದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸಮಸ್ಯೆಗೆ ಸ್ಪಂದಿಸಲಾಗದಂತಹ ಸ್ಥಿತಿಯಲ್ಲಿದ್ದಾರೆ. ರಾಜ್ಯ ಸರಕಾರದ ಬೇಜವಾಬ್ದಾರಿ ನೀತಿಯೇ ಈ ರೀತಿಯ ವಿಳಂಬಕ್ಕೆ ಕಾರಣ ಎಂದು ಆರೋಪಿಸಿ ಇದೀಗ ಪುತ್ತೂರು ನಗರಸಭೆಯ ಚುನಾಯಿತ ಪ್ರತಿನಿಧಿಗಳು ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.
ರಾಜ್ಯದ ಸರಿ ಸುಮಾರು 102 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಮುಂದಿನ ಅಗಸ್ಟ್ ತಿಂಗಳಿಗೆ ಒಂದು ವರ್ಷ ಪೂರೈಸಿದಂತಾಗುತ್ತದೆ. ಆದರೆ ಜನಪ್ರತಿನಿಧಿಗಳು ಆಯ್ಕೆ ಮಾಡಿದಂತಹ ಜನರಿಗೆ ಮಾತ್ರ ತಮ್ಮ ಪ್ರತಿನಿಧಿಗಳಿಂದ ತಮಗೆ ಬೇಕಾಗುವ ಕೆಲಸವನ್ನು ಮಾಡಿಸಿಕೊಳ್ಳಲು ಮಾತ್ರ ಸಾಧ್ಯವಾಗುತ್ತಿಲ್ಲ. ಪ್ರತೀ ಸ್ಥಳೀಯ ಸಂಸ್ಥೆಗಳ ಪಾಡು ಇದಾಗಿದೆ. ಪುತ್ತೂರು ನಗರಸಭೆಯಲ್ಲೂ ಇದೇ ರೀತಿಯ ಸಮಸ್ಯೆ ಕಾಡಲಾರಂಭಿಸಿದೆ.
ಮಳೆಗಾಲದ ಸಂದರ್ಭದಲ್ಲಿ ತಮ್ಮ ತಮ್ಮ ವಾರ್ಡ್ ಗಳಿಗೆ ಸಂಬಂಧಪಟ್ಟ ಚರಂಡಿಗಳ ಹೂಳೆತ್ತುವ ಕಾರ್ಯ ಸೇರಿದಂತೆ ಸಣ್ಣ ಪುಟ್ಟ ಕೆಲಸ ಕಾರ್ಯಗಳನ್ನು ಪೂರೈಸಲಾಗದ ಸ್ಥಿತಿಯಲ್ಲಿ ಜನಪ್ರತಿನಿಧಿಗಳಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿನ ಮೀಸಲಾತಿ ಪ್ರಶ್ನಿಸಿ ರಾಜ್ಯದ ಕೇವಲ ಒಂದೆರಡು ಸ್ಥಳೀಯ ಸಂಸ್ಥೆಗಳು ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರ ಶಿಕ್ಷೆಯನ್ನು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು ಅನುಭವಿಸಬೇಕಾದ ಪರಿಸ್ಥಿತಿಯಿದೆ.
ಚುನಾವಣೆಯಲ್ಲಿ ಆಯ್ಕೆಯಾದ ಜನಪ್ರತಿನಿಧಿಗಳು ಚುನಾವಣೆ ಕಳೆದು ವರ್ಷಗಳೇ ಕಳೆಯಲಾರಂಭಿಸಿದ್ದರೂ, ಇಂದಿನವರೆಗೂ ಜನಪ್ರತಿನಿಧಿತ್ವದ ಪ್ರಮಾಣ ವಚನವನ್ನೇ ಸ್ವೀಕರಿಸಿಲ್ಲ. ಪ್ರತಿಯೊಂದು ಕಾಮಗಾರಿಗೂ ಅಧಿಕಾರಿಗಳು ಕ್ರೀಯಾ ಯೋಜನೆಯನ್ನು ತಯಾರಿಸಬೇಕಾಗಿರುವುದಲ್ಲದೆ, ಮಂಗಳೂರಿನಲ್ಲಿರುವ ಜಿಲ್ಲಾಧಿಕಾರಿಗಳ ಅನುಮೋದನೆಯ ಸಹಿಗಾಗಿ ಕಾಯುವಂತಹ ಸ್ಥಿತಿಯಿದೆ. ಅಲ್ಲದೆ ನಗರಸಭೆಯಲ್ಲಿ ತಯಾರಿಸಿದ ಕ್ರೀಯಾ ಯೋಜನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಹಸ್ತಕ್ಷೇಪವೂ ಹೆಚ್ಚಾಗುತ್ತಿದೆ ಎನ್ನುವ ಆರೋಪವೂ ಜನಪ್ರತಿನಿಧಿಗಳಿಂದ ಕೇಳಿ ಬರಲಾರಂಭಿದೆ.
ಸರಕಾರದ ವೈಫಲ್ಯವೇ ಈ ರೀತಿಯ ವಿಳಂಬಕ್ಕೆ ಕಾರಣ ಎನ್ನುವ ಆರೋಪದ ನಡುವೆಯೇ ಇದೀಗ ಪುತ್ತೂರಿನ ನಗರಸಭೆಯ ಚುನಾಯಿತ ಜನಪ್ರತಿನಿಧಿಗಳು ನಮ್ಮ ಅಧಿಕಾರ ನಮಗೆ ಕೊಡಿ ಎನ್ನುವ ಪ್ರತಿಭಟನೆಯನ್ನೂ ಹಮ್ಮಿಕೊಳ್ಳುವ ಮೂಲಕ ಸರಕಾರದ ಗಮನ ಸೆಳೆಯಲು ತೀರ್ಮಾನಿಸಿದೆ. ಪುತ್ತೂರು ನಗರ ಸಭೆಯಲ್ಲ ಒಟ್ಟು 31 ಸದಸ್ಯರಿದ್ದು, ಶಾಸಕ ಹಾಗೂ ಸಂಸದರನ್ನು ಸೇರಿಸಿ 33 ಸದಸ್ಯರ ಬಲವನ್ನು ಹೊಂದಿದೆ. ಚುನಾವಣೆಯಲ್ಲಿ ಆಯ್ಕೆಯಾದ ಬಳಿಕ ಆಯಾ ವಾರ್ಡ್ ಗಳ ಜನ ತಮ್ಮ ವಾರ್ಡ್ ಗಳಲ್ಲಿ ನಡೆಯಬೇಕಾದ ಕಾಮಗಾರಿಗಳ ಬಗ್ಗೆ ಇದೀಗ ಸದಸ್ಯರನ್ನು ಪ್ರಶ್ನಿಸಲಾರಂಭಿಸಿದ್ದಾರೆ. ಆದರೆ ಚುನಾವಣೆ ಗೆದ್ದಿರುವುದನ್ನು ಬಿಟ್ಟರೆ, ತಮಗೆ ಯಾವುದೇ ಅಧಿಕಾರವಿಲ್ಲದೆ ಅಸಹಾಯಕರಾಗಿದ್ದಾರೆ.
ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ವರ್ಷಗಳು ಕಳೆಯಲಾರಂಭಿಸಿದ್ದರೂ, ಜನಪ್ರತಿನಿಧಿಗಳಿಗೆ ಅಧಿಕಾರವಿಲ್ಲದೆ ಪರದಾಡುವಂತ ಸ್ಥಿತಿಯಲ್ಲಿದ್ದಾರೆ. ಸರಕಾರ ಕೂಡಲೇ ಈ ಬಗ್ಗೆ ಗಮನಹರಿಸು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.