ಮಂಗಳೂರು: ಪ್ರೇಮ ನಿರಾಕರಣೆ-ಪ್ರೇಯಸಿಗೆ ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಭಗ್ನ ಪ್ರೇಮಿ
Fri, Jun 28 2019 07:41:23 PM
ಮಂಗಳೂರು, ಜೂ 28 (Daijiworld News/SM): ತಾನು ಪ್ರೀತಿಸಿದ ಪ್ರೇಯಸಿ ಪ್ರೇಮ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಿಯಕರನೇ ಯುವತಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ನಗರದ ಹೊರವಲಯದ ಕುಂಪಲದಲ್ಲಿ ಜೂನ್ 28ರ ಶುಕ್ರವಾರ ಸಂಜೆ ನಡೆದಿದೆ. ಸುಶಾಂತ್(22) ಚೂರಿಯಿಂದ ಇರಿದ ಆರೋಪಿಯಾಗಿದ್ದಾನೆ.
ವಿದ್ಯಾರ್ಥಿನಿ ದೀಕ್ಷಾ(20) ಇರಿತಕ್ಕೊಳಗಾದ ಯುವತಿಯಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾಳೆ. ಮೂಲಗಳ ಪ್ರಕಾರ ಸುಶಾಂತ್ ಹಾಗೂ ದೀಕ್ಷಾ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ, ದೀಕ್ಷಾ ಪ್ರೀತಿಸಲು ನಿರಾಕರಿಸಿದ ಸಂದರ್ಭ ಆತನ ಪ್ರಿಯಕರ ಸುಶಾಂತ್ ಮಾನಸಿಕವಾಗಿ ನೊಂದುಕೊಂಡಿದ್ದಾನೆ. ಅಲ್ಲದೆ, ತನ್ನ ಪ್ರೇಯಸಿಯ ವಿರುದ್ಧ ಆಕ್ರೋಶಗೊಂಡಿದ್ದಾನೆ.
ತನಗೆ ಸಿಗದ ಪ್ರೀತಿ ಮತ್ತೊಬ್ಬರಿಗೂ ಸಿಗಬಾರದೆಂದು ಯೋಚಿಸಿದ ಸುಶಾಂತ್ ನೇರವಾಗಿ ಯುವತಿಯ ಬಳಿಗೆ ಬಂದಿದ್ದಾನೆ. ಆಕೆ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಆಕೆಯನ್ನು ರಸ್ತೆಯಲ್ಲೇ ಅಡ್ಡಗಟ್ಟಿದ ಭಗ್ನ ಪ್ರೇಮಿ ಸುಶಾಂತ್, ದೀಕ್ಷಾಳಿಗೆ ಮನಬಂದಂತೆ ಚಾಕುವಿನಿಂದ ಇರಿದಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದ ಆತ, ಸ್ವತಃ ಕುತ್ತಿಗೆಯನ್ನು ಹಲವು ಬಾರಿ ಕೊಯ್ದುಕೊಂಡಿದ್ದಾನೆ. ಈ ಎಲ್ಲಾ ಘಟನೆ ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಹಾಗೂ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ಕೆಲವು ಮಂದಿ ಯುವಕನ ಕೈಯಿಂದ ಮಚ್ಚು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಾಗಲೇ ಯುವತಿ ಪ್ರಜ್ಞೆ ಕಳೆದುಕೊಂಡು ನಡು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದಳು.
ಬಳಿಕ ಸ್ಥಳಕ್ಕಾಗಮಿಸಿದ ಆಂಬ್ಯುಲೆನ್ಸ್ ಮೂಲಕ ಯುವತಿಯನ್ನು ಹಾಗೂ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೇ ಮುನ್ನಡೆಸಿದ್ದಾರೆ.