ಮಂಗಳೂರು, ಜೂ29(Daijiworld News/SS): ಕುವೈಟ್ನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಮಂಗಳೂರು ಮೂಲದ ಯುವಕರ ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದಕ್ಕೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಮ್ಮೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ಗೆ ಪತ್ರ ಬರೆದಿರುವ ನಳಿನ್ ಕುಮಾರ್ ಕಟೀಲ್, ಕುವೈಟ್ನಲ್ಲಿ ಉದ್ಯೋಗ ವಂಚಿತರಾಗಿ ತಾಯ್ನಾಡಿಗೆ ಮರಳಲು ಕಾಯುತ್ತಿರುವ 73 ಮಂದಿ ಸಂತ್ರಸ್ತ ಭಾರತೀಯರ ಬಿಡುಗಡೆಗೆ ಕುವೈಟ್ ಸರಕಾರದ ಮೇಲೆ ರಾಜತಾಂತ್ರಿಕ ಒತ್ತಡ ಹೇರುವಂತೆ ಆಗ್ರಹಿಸಿದ್ದಾರೆ.
ಕುವೈಟ್ಗೆ ಉದ್ಯೋಗಕ್ಕೆಂದು ತೆರಳಿದ ಮಂಗಳೂರು ಮೂಲದ 35 ಯುವಕರು ಉದ್ಯೋಗವೂ ಇಲ್ಲದೆ, ಆಹಾರವೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ದಿನ ದೂಡುತ್ತಿದ್ದಾರೆ. 73 ಮಂದಿ ಭಾರತೀಯರು ಕೆಲಸ ಸಿಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅವರನ್ನು ಮರಳಿ ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಎಲ್ಲ ರೀತಿಯ ನೆರವು ನೀಡುತ್ತಿದೆ. ಆದರೂ ಸಂತ್ರಸ್ತರನ್ನು ತಾಯ್ನಾಡಿಗೆ ಮರಳಿಸುವಲ್ಲಿ ಕುವೈಟ್ ಕಾನೂನಿನಿಂದಾಗಿ ವಿಳಂಬವಾಗುತ್ತಿದೆ ಎಂದು ಪತ್ರದಲ್ಲಿ ದೂರಿದ್ದಾರೆ.
ಕುವೈಟ್ನಲ್ಲಿ ಸಂತ್ರಸ್ತರಿಗೆ ಉದ್ಯೋಗ ನೀಡಿದ ಕಂಪನಿಯು ಬಾಕಿ ಮೊತ್ತ ಇರಿಸಿಕೊಂಡು ಯುವಕರಿಗೆ ಅನ್ಯಾಯ ಎಸಗಿದೆ. ಆದ್ದರಿಂದ ಸಂತ್ರಸ್ತರ ಬಾಕಿ ಮೊತ್ತವನ್ನು ಚುಕ್ತಾ ಮಾಡುವ ಜತೆಗೆ ಅವರಿಗೆ ತಾಯ್ನಾಡಿಗೆ ಮರಳಲು ವಿಮಾನದ ಟಿಕೆಟ್ ವ್ಯವಸ್ಥೆಯನ್ನು ಒದಗಿಸಬೇಕಾಗಿದೆ. ಪಾಸ್ಪೋರ್ಟ್ನ್ನು ಕೂಡ ವಾಪಸ್ ನೀಡಲು ಒತ್ತಡ ಹೇರುವಂತೆ ಕುವೈಟ್ನ ಭಾರತೀಯ ರಾಯಭಾರಿ ಕಚೇರಿಗೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಹಿಂದೆ ಸಂತ್ರಸ್ತ 35 ಮಂದಿ ಯುವಕರಿಗೆ ಅವರ ಪಾಸ್ಪೋರ್ಟ್ ಮರಳಿ ಲಭಿಸುವಂತೆ ಮಾಡಿ, ಆ ಮೂಲಕ ಭಾರತಕ್ಕೆ ಹಿಂದಿರುಗಲು ಸಿದ್ಧತೆಗಳನ್ನು ಮಾಡಬೇಕೆಂದು ನಳಿನ್ ಕೇಂದ್ರ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದರು.