ಮಂಗಳೂರು, ಜೂ29(Daijiworld News/SS): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಹೆಚ್ಚಾಗುತ್ತಿರುವ ಡೆಂಗ್ಯೂ ಜ್ವರ, ಮಲೇರಿಯಾ ಪ್ರಕರಣ ಜನರಲ್ಲಿ ಆತಂಕ ಉಂಟು ಮಾಡಿದೆ.
ನಗರದ ಹೊರವಲಯದ ಮುಲ್ಕಿ ಸಮೀಪದ ಕಾರ್ನಾಡು ಸದಾಶಿವ ನಗರ, ಬಿಜಾಪುರ ಕಾಲನಿ ಹಾಗೂ ಆಶ್ರಯ ಕಾಲನಿಯಲ್ಲಿ ಕಳೆದ ಎರಡು ತಿಂಗಳಿನಿಂದ ಮಲೇರಿಯಾ ಜ್ವರ ಜನರನ್ನು ಕಾಡುತ್ತಿದೆ. ಕಳೆದೆರಡು ತಿಂಗಳಲ್ಲಿ 25 ಜನರಿಗೆ ಮಲೇರಿಯಾ ಇರುವುದು ದೃಢಪಟ್ಟಿದೆ.
ಮಲೇರಿಯಾ ಜ್ವರ ಕಾಣಿಸಿಕೊಂಡಿರುವ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ 10 ಜನರ ತಂಡವು ಮಲೇರಿಯಾ ಸರ್ವೇ ನಡೆಸುತ್ತಿದೆ. ಮನೆಗಳ ಒಳಗೆ, ಪರಿಸರದಲ್ಲಿ ಫಾಗಿಂಗ್ ಮತ್ತು ಚರಂಡಿಗಳಿಗೆ ಔಷಧ ಸಿಂಪರಣೆ ಮಾಡುತ್ತಿದೆ. ಸ್ವಚ್ಛತೆಯ ಕಾಮಗಾರಿಯನ್ನೂ ನಡೆಸಲಾಗುತ್ತಿದೆ. ಪ್ರಸ್ತುತ ಮಲೇರಿಯಾ ಪ್ರಕರಣ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆಯವರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಈವರೆಗೆ ಕಳೆದೆರಡು ತಿಂಗಳ ಅವಧಿಯಲ್ಲಿ ದಾಖಲಾಗಿರುವ 25 ಮಂದಿ ಮಲೇರಿಯಾ ಪೀಡಿತರಲ್ಲಿ ಮೂವರು ಸಂಪೂರ್ಣ ಗುಣಮುಖರಾಗಿದ್ದಾರೆ. ಉಳಿದ 22 ಮಂದಿ ಈಗಲೂ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಸಂಬಂಧಿಸಿ ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿರುವ ಹೊರತಾಗಿಯೂ ಮಲೇರಿಯಾ, ಡೆಂಗ್ಯೂ ಜ್ವರ ದಂತಹ ರೋಗಗಳ ವರದಿಯಲ್ಲಿ ಮಂಗಳೂರು ಸೇರಿಕೊಂಡಿರುವುದು, ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ.