ಮಂಗಳೂರು, ಜೂ 29 (Daijiworld News/MSP): ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಪೊಲೀಸ್ ಇಲಾಖೆಯ ಬಗ್ಗೆ ಭಯಪಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ನಡೆಯುವ ಅಕ್ರಮಗಳಿಗೆ ಯು.ಟಿ.ಖಾದರ್ ಅಭಯಹಸ್ತವಿದ್ದು, ಕಾನೂನು ಸುವ್ಯವಸ್ಥೆ ಕೈ ತಪ್ಪಲು ಖಾದರ್ ನೇರ ಹೊಣೆ ಎಂದು ರಾಜ್ಯ ಸರ್ಕಾರ ಮತ್ತು ಸಚಿವ ಖಾದರ್ ವಿರುದ್ದ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಜೂ. 29 ರ ಶನಿವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, "ಶುಕ್ರವಾರ ನಗರದ ದೇರಳಕಟ್ಟೆಯಲ್ಲಿ ವಿದ್ಯಾರ್ಥಿನಿಯೊಬ್ಬನಿಗೆ ಪಾಗಲ್ ಪ್ರೇಮಿ ನಡು ರಸ್ತೆಯಲ್ಲೇ ಹತ್ತಾರು ಬಾರಿ ಚುಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಆ ಬಳಿಕ ಆತನು ಕುತ್ತಿಗೆ ಕೊಯ್ದುಕೊಂಡಿದ್ದಾನೆ. ಈ ಘಟನೆ , ಗಮನಿಸಿದರೆ ಪೊಲೀಸರ ಬಗ್ಗೆ ಗೌರವ , ಭಯವೇ ಇಲ್ಲವೆಂಬಂತ ಪರಿಸ್ಥಿತಿ ನಿರ್ಮಾಣವಾಗಿದೆ".
"ರಾಜ್ಯ ಸರ್ಕಾರ ಮೊದಲು ಕಾನೂನು ಸುವ್ಯವಸ್ಥೆ ಸರಿಪಡಿಸಲಿ, ಜಾತಿ ಆಧಾರದಲ್ಲಿ ವರ್ಗಾವಣೆ ಮಾಡದೇ ಪೊಲೀಸರನ್ನು ಇನ್ನಷ್ಟು ಬಲಿಷ್ಟರನ್ನಾಗಿಸಿ ಎಂದು ರಾಜ್ಯ ಸರ್ಕಾರ ಕಾರ್ಯವೈಖರಿ ಬಗ್ಗೆ ಕಿಡಿಕಾರಿದರು. ಜಿಲ್ಲೆಯಲ್ಲಿ ನಡೆಯುವ ಅಕ್ರಮಗಳಿಗೆ ಯು.ಟಿ.ಖಾದರ್ ಅಭಯಹಸ್ತವಿದೆ ಎಂದು ಆರೋಪಿಸಿದ ಅವರು ದನ ಸಾಗಾಟದ ವೇಳೆ ಪಟಾಕಿ ಸಿಡಿಸೋದು, ಅವರಿಗೆ ಬೆಂಬಲಿಸೋದು ನಡೆಯುತ್ತಿದೆ. ಅಕ್ರಮ ಖಸಾಯಿಖಾನೆಗಳು ಉಸ್ತುವಾರಿ ಸಚಿವರ ಅಭಯ ಹಸ್ತವಿಲ್ಲದೇ ಹೇಗೆ ನಡೆಯುತ್ತೆ?ಎಂದು ಪ್ರಶ್ನಿಸಿದರು. ಉಸ್ತುವಾರಿ ಸಚಿವ ಯು.ಟಿ ಖಾದರ್ ತಾವು ಮಾಡುತ್ತಿರುವ ಅಕ್ರಮಗಳನ್ನ ತಕ್ಷಣ ನಿಲ್ಲಿಸಬೇಕು. ಇದೇ ರೀತಿ ವರ್ತಿಸಿದರೆ ಉಸ್ತುವಾರಿ ಸಚಿವರಿಗೆ ಮತ್ತು ಉಸ್ತುವಾರಿ ಸಚಿವ ಎನ್ನುವ ಪದವಿಗೆ ಗೌರವ ಸಿಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದೇ ವೇಳೆ ಸಿಎಂ ಗ್ರಾಮ ವಾಸ್ತವ್ಯ ಕೇವಲ ನಾಟಕವಷ್ಟೇಎಂದು ಹೇಳಿದ ಅವರು ಸಮಸ್ಯೆ ಹೇಳಿಕೊಂಡು ಬಂದ್ರೆ ಲಾಠಿಚಾರ್ಜ್ ಮಾಡಬೇಕು ಎನ್ನುವ ಕೆಟ್ಟ ಸಿಎಂ ರಾಜ್ಯದಲ್ಲಿದ್ದಾರೆ ಎಂದರು. ಇದೇ ವೇಳೆ ಐಎಂಎ ಪ್ರಕರಣ ಸಿಬಿಐ ಮತ್ತು ಇಡಿ ತನಿಖೆ ನೀಡಬೇಕು ಎಂದು ಒತ್ತಾಯಿಸಿದರು.