ಮಂಗಳೂರು, ಜೂ29(Daijiworld News/SS): ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ, ಗೋವುಗಳ ಕಳವು ಪ್ರಕರಣಗಳಿಗೆ ಕಡಿವಾಣವಿಲ್ಲದ ಹಿನ್ನೆಲೆಯಲ್ಲಿ ದನದ ಹಾಲು ಮಾರಿ ಬದುಕುವವರು ಜೀವನಾಧಾರವನ್ನೇ ಕಳೆದುಕೊಳ್ಳುವಂತಾಗಿದೆ. ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುವುದು, ಗೋವುಗಳನ್ನು ಕಳ್ಳತನ ಮಾಡುವ ಪ್ರಕರಣ ಹೆಚ್ಚಾಗುತ್ತಿದೆ. ಹೀಗಾಗಿ ಇದರ ವಿರುದ್ಧ ಜಿಲ್ಲಾಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿ.ಎಚ್.ಪಿ ಆಗ್ರಹಿಸಿದೆ.
ಗೋವುಗಳ ಕಳ್ಳತನ ಹಾಗೂ ಅಕ್ರಮ ಸಾಗಾಟ ನಡೆಸುವ ಮೂಲಕ ಮತಾಂಧ ಶಕ್ತಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಷಡ್ಯಂತ್ರ ನಡೆಸಿವೆ. ಮಾರಕಾಯುಧ ಬಳಸಿ ಹಟ್ಟಿಯಿಂದ ಗೋವುಗಳನ್ನು ಕಳ್ಳತನ ಮಾಡುವ ಪ್ರಕರಣ ಪ್ರತಿದಿನ ನಡೆಯುತ್ತಿದೆ. ಇದರಿಂದ ಹೈನುಗಾರರು, ರೈತರು ಆತಂಕದಿಂದ ಬದುಕು ಸ್ಥಿತಿ ನಿರ್ಮಾಣವಾಗಿದೆ ಎಂದು ವಿ.ಎಚ್.ಪಿ ದೂರಿದೆ.
ಹಟ್ಟಿಯಿಂದ, ಗೋ ಶಾಲೆಗಳಿಂದ ಗೋವುಗಳನ್ನು ಕದಿಯುತ್ತಿದ್ದರೂ ಸರ್ಕಾರ ಮೌನ ವಹಿಸಿದೆ. ಗೋವುಗಳನ್ನು ಕದ್ದು ಹತ್ಯೆ ಮಾಡುತ್ತಿರುವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದೆ.
ಜೊತೆಗೆ, ಗೋವಂಶ ರಕ್ಷಣೆಗೆ ಒತ್ತಾಯಿಸಿ ಜು.3ರಂದು ದ.ಕ ಮತ್ತು ಉಡುಪಿ ಜಿಲ್ಲೆಯ ತಾಲೂಕುಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ವಿ.ಎಚ್.ಪಿ ತಿಳಿಸಿದೆ.