ವಿಟ್ಲ, ಜೂ 29 (Daijiworld News/MSP): ಲಾರಿಯಲ್ಲಿದ್ದ ತೆಂಗಿನ ಸಿಪ್ಪೆಯ ಹುಡಿಯನ್ನು ಕಬ್ಬಿಣದ ಹಾರೆ ಬಳಸಿ ಅನ್ಲೋಡ್ ಮಾಡುತ್ತಿದ್ದ ಸಂದರ್ಭ ಲಾರಿಯ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗೆ ಹಾರೆ ತಗುಲಿದ ಪರಿಣಾಮ ಓರ್ವ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಕೊಳ್ನಾಡು ಗ್ರಾಮದ ಕಲ್ಕಾಜೆಯಲ್ಲಿ ಜೂ. 29 ರ ಶನಿವಾರ ನಡೆದಿದೆ.
ಮೃತರನ್ನು ಪಂಜ ನಿವಾಸಿ ವಾಸುದೇವ ಪ್ರಭು (50) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಒರಿಸ್ಸಾ ಮೂಲದ ಸುಜಿತ್(20) ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಭೀರ ಗಾಯಗೊಂಡ ವಾಸುದೇವ ಪ್ರಭು ಅವರು ಆಸ್ಪತ್ರೆಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಕಲ್ಕಾಜೆಯಲ್ಲಿರುವ ನಾರಾಯಣ ನಾಯ್ಕ ಎಂಬವ ಕೋಳಿ ಫಾರ್ಮ್ ಗೆ ಬದಿಯಡ್ಕ ಮೂಲದ ಲಾರಿಯಲ್ಲಿ ನೀಲೇಶ್ವರದಿಂದ ತೆಂಗಿನ ಸಿಪ್ಪೆಯ ಹುಡಿಯನ್ನು ತರಲಾಗಿತ್ತು. ಇದನ್ನು ಅನ್ಲೋಡ್ ಮಾಡುತ್ತಿದ್ದ ಲಾರಿ ನಿಲ್ಲಿಸಿದ ಸ್ಥಳದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಕಬ್ಬಿಣದ ಹಾರೆ ತಗುಲಿ ವಿದ್ಯುತ್ ಶಾಕ್ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಇವರಿಬ್ಬರನ್ನು ಆಸ್ಪತ್ರೆಗೆ ಸಾಗಿಸುತ್ತಿರುವಾದ ವಾಸುದೇವ ಪ್ರಭು ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ವಿಟ್ಲ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂದು ತಿಂಗಳಲ್ಲಿ ಎರಡನೇ ಪ್ರಕರಣ:
ಕಳೆದ ಜೂ. 5 ರಂದು ಕುಡ್ತಮುಗೇರು ಸಮೀಪ ಕೆ.ಎಂ.ಎಫ್ ಫೀಡ್ ಸಾಗಾಟದ ಲಾರಿಯಲ್ಲಿದ್ದ ಕ್ಲೀನರ್ ಹಾಸನ ಮೂಲದ ದುಶ್ಯಂತ್ ಲಾರಿಯ ಮೇಲೆ ಹತ್ತಿ ಕ್ಯಾಬಿನ್ ನಲ್ಲಿದ್ದ ಅಂಗಿಯನ್ನು ತೆಗೆಯುತ್ತಿದ್ದ ವೇಳೆ ಹೈಟೆನ್ಶನ್ ವಯರ್ ತಗುಲಿ ಮೃತಪಟ್ಟ ಘಟನೆ ನಡೆದಿತ್ತು. ಇದೀಗ ಮತ್ತೊಂದು ಅದೇ ತೆರನಾದ ಘಟನೆ ನಡೆದಿರುವುದು ಅಚ್ಚರಿಗೆ ಕಾರಣವಾಗಿದೆ.