ಮಂಗಳೂರು, ಜೂ29(DaijiworldNews/AZM): ಸಸಿ ನೆಡುವ ಅಭಿಯಾನದ ಮೂಲಕ ಮಂಗಳೂರು ಮಹಾನಗರವನ್ನು ಗ್ರೀನ್ ಮಂಗಳೂರು ಮಾಡುವ ಗುರಿಗೆ ಮಂಗಳೂರಿನ ಸಮಸ್ತ ನಾಗರಿಕರ ಸಹಕಾರ ಬೇಕಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಅವರು ಸಂಘನಿಕೇತನದಲ್ಲಿ ನಡೆದ ಹತ್ತು ಸಾವಿರ ಸಸಿ ನೆಡುವ ಮಹಾ ಅಭಿಯಾನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಸಿ ನೆಡುವ ಜೊತೆಯಲ್ಲಿ ನಾಗರಿಕರು ಇಂಗುಗುಡಿ, ಮಳೆಕೊಯ್ಲು ಮುಂತಾದ ಕ್ರಮಗಳನ್ನು ಅನುಸರಿಸಿದರೆ, ಇದಕ್ಕೆ ಸಂಘ, ಸಂಸ್ಥೆಗಳು ಕೈ ಜೋಡಿಸಿದರೆ ಮತ್ತಷ್ಟು ಸುಲಭವಾಗುತ್ತದೆ. ಇದರೊಂದಿಗೆ ರಾಜ್ಯ ಸರಕಾರ 120 ಕೋಟಿ ಅನುದಾನ ಒದಗಿಸುವ ಮೂಲಕ ತುಂಬೆ ನೂತನ ಡ್ಯಾಂನಲ್ಲಿ ಏಳು ಮೀಟರ್ ನೀರು ನಿಲ್ಲಿಸುವ ಕೆಲಸ ಮಾಡಿದರೆ ಮಂಗಳೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಬಹುದು ಎಂದು ಶಾಸಕ ಕಾಮತ್ ಹೇಳಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯಿಂದ ಹತ್ತು ಸಾವಿರ ಸಸಿ ಪೂರೈಕೆ ಮಾಡಲು ಒಪ್ಪಿರುವ ಅರಣ್ಯಾಧಿಕಾರಿ ಶ್ರೀಧರ್, ಜೆಸಿಬಿ ನೀಡುವ ಮೂಲಕ ಸಹಕಾರ ನೀಡುತ್ತಿರುವ ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಶನ್, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಾ ವಿದ್ಯಾರ್ಥಿಗಳಿಗೆ, ಮತ್ತು ಎಲ್ಲಾ ಸಂಘ, ಸಂಸ್ಥೆಗಳ ಪ್ರಮುಖರಿಗೆ ಶಾಸಕ ಕಾಮತ್ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ವಾಮನ್ ಶೆಣೈ, ಸುನಿಲ್ ಆಚಾರ್, ವಿಶ್ವ ಹಿಂದು ಪರಿಷತ್ತಿನ ಪ್ರಮುಖರಾದ ಎಂ.ಬಿ ಪುರಾಣಿಕ್, ಅರಣ್ಯ ಅಧಿಕಾರಿ ಶ್ರೀಧರ್, ಸಿವಿಲ್ ಕಾಂಟ್ರಾಕ್ಟ್ ಅಸೋಸಿಯೇಷನಿನ ಅದ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಕ್ರೆಡಾಯ್ ಅದ್ಯಕ್ಷ ಡಿ.ಬಿ ಮೆಹ್ತಾ, ಎನ್ಎಸ್ಎಸ್ ಅಧಿಕಾರಿ ವಿನೂತಾ ರೈ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.