ಮಂಗಳೂರು,ಜೂ 29 (Daijiworld News/MSP): ತನ್ನ ಪ್ರೀತಿಯನ್ನು ತಿರಸ್ಕರಿಸಿದ್ದರಿಂದ ಕೋಪಗೊಂಡ ಭಗ್ನ ಪ್ರೇಮಿಯೊಬ್ಬ ವಿದ್ಯಾರ್ಥಿನಿಗೆ ಇರಿದು ಬಳಿಕ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ, ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದರೂ ಆಕೆ ಚಿಕಿತ್ಸೆಗೆ ಸ್ಪಂದಿಸುತ್ತಿದಾಳೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಯುವತಿ ಮೃತಪಟ್ಟದ್ದಾಳೆ ಎಂದು ಸುಳ್ಳು ಸುದ್ದಿ ಹಬ್ಬಿತ್ತಿದ್ದು, ಈ ಕುರಿತು ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಈ ಸುದ್ದಿ ಸತ್ಯಕ್ಕೆ ದೂರವಾದುದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ.
ಕಾರ್ಕಳದ ನಿಟ್ಟೆಯಲ್ಲಿ ಎಂಬಿಎ ವಿದ್ಯಾರ್ಥಿನಿಯಾಗಿದ್ದ ದೇರಳಕಟ್ಟೆ ಬಗಂಬಿಲದ ನಿವಾಸಿ ದೀಕ್ಷಾ (20) ಎಂಬಾಕೆಯ ಮೇಲೆ ನಗರದ ಶಕ್ತಿನಗರದ ರಾಮಶಕ್ತಿ ಮಿಷನ್ ಬಳಿಯ ನಿವಾಸಿ ಸುಶಾಂತ್ (28) ಎಂಬಾತ ಚೂರಿಯಿಂದ ಇರಿದು ಆಕೆಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ. ವಿದ್ಯಾರ್ಥಿನಿ ಕಾಲೇಜು ಮುಗಿಸಿ ರಸ್ತೆಯಲ್ಲಿ ತನ್ನ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಈ ದಾಳಿ ನಡೆದಿತ್ತು.
ದೀಕ್ಷಾ ಎಂದಿನಂತೆ ದೇರಳಕಟ್ಟೆಯ ಕ್ಷೇಮಾ ಬಸ್ ನಿಲ್ದಾಣದಲ್ಲಿ ಇಳಿದು ಆಸ್ಪತ್ರೆಯ ಹಿಂಭಾಗದಲ್ಲಿರುವ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟರ್ನಲ್ಲಿ ಹಿಂದಿನಿಂದ ಬಂದ ಸುಶಾಂತ್ ಇದ್ದಕ್ಕಿದ್ದಂತೆ ಚಾಕುವಿನಿಂದ ಹಲ್ಲೆ ನಡೆಸಿದ್ದ. ಸ್ಥಳೀಯರು ಆತನನ್ನು ತಡೆಯಲು ಪ್ರಯತ್ನಿಸಿದಾಗ, ಅವನು ತನ್ನ ಕುತ್ತಿಗೆ ಕೊಯ್ದು ಬೆದರಿಸಿದ್ದ. ವಿದ್ಯಾರ್ಥಿನಿ ರಕ್ತದ ಮಡುವಿನಲ್ಲಿ ಬಿದ್ದು ನೋವಿನಿಂದ ನರಳುತ್ತಿದ್ದರೂ, ಕನಿಕರ ತೋರದ ಆರೋಪಿ ಆಕೆಯನ್ನು ಪ್ರಶ್ನಿಸುತ್ತಲೇ 12 ಬಾರಿ ಮನಬಂದಂತೆ ಇರಿದ್ದ. ಸ್ಥಳದಲ್ಲಿ ಇದ್ದವರನ್ನು ಕಂಡು ಬನ್ನಿ ಬನ್ನಿ ಎಂದು ಕೈ ಸನ್ನೆ ಮಾಡಿ ಬೆದರಿಸುತ್ತಲೇ ತನ್ನ ಕುತ್ತಿಗೆಯನ್ನು ಕುಯ್ದುಕೊಂಡಿದ್ದ. ಸ್ಥಳೀಯರು ಇವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ವಿದ್ಯಾರ್ಥಿನಿ ದೀಕ್ಷಾ, ಎದೆ, ಹೊಟ್ಟೆ, ಕುತ್ತಿಗೆ ಕೈ ಕಾಲುಗಳು ಸೇರಿದಂತೆ ದೇಹದ 10-12 ಕಡೆ ಮಾರಕವಾಗಿ ಇರಿದ ಪರಿಣಾಮ ಹೃದಯ, ಕರುಳು ವಿಪರೀತಿ ಹಾನಿಯಾಗಿದೆ. ಗಂಭೀರ ಗಾಯಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ದೀಕ್ಷಾಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ವೆಂಟಿಲೇಟನರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಆಕೆ ಚಿಕಿತ್ಸೆಗೆ ಸಕರಾತ್ಮಕವಾಗಿ ಸ್ಪಂದಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ.