ಮಂಗಳೂರು,ಜೂ29(DaijiworldNews/AZM): ಕೇವಲ ಗಾಂಧಿ ಹೆಸರಿನಲ್ಲಿ ಆಡಳಿತ ನಡೆಸಲು ಮುಂದಾದ ಕಾಂಗ್ರೆಸ್ ಗೆ ಇದೀಗ ಬಿಜೆಪಿ ಮುಂದೆ ಪಕ್ಷದ ಸಿದ್ದಾಂತ ಇಲ್ಲದಂತಾಗಿದೆ. ರಾಜ್ಯದಲ್ಲಿ ಸರ್ಕಾರ ಇದ್ದು ಇಲ್ಲದಂತಾಗಿದೆ, ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಇನ್ನು ಸಿಎಂ ಹೋಟೆಲ್ ನ ಒಳಗೆ ಇದ್ರೆ ಉತ್ತಮ. ಹೋಟೆಲ್ ನಿಂದ ಹೊರಗೆ ಬಂದು ಗ್ರಾಮ ವಾಸ್ತವ್ಯದ ಹೆಸರಿನಲ್ಲಿ ಕೋಟಿ ಗಟ್ಟಲೆ ಹಣ ವ್ಯಯಿಸುತ್ತಿದ್ದಾರೆ. ಈ ಗ್ರಾಮ ವಾಸ್ತವ್ಯದಿಂದ ರಾಜ್ಯದ ಜನರಿಗೆ ಏನು ಪ್ರಯೋಜನವಿಲ್ಲ. ಸರ್ಕಾರ ನಡೆಸಲಾಗದೆ ಮಾಧ್ಯಮದ ಮತ್ತು ಜನರ ಗಮನ ಸೆಳೆಯಲು ಈ ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದರು.ಈ ಹಿಂದೆ 2004-06 ರ ಅವಧಿಯಲ್ಲಿ ಕುಮಾರ ಸ್ವಾಮಿ ಇದೇ ರೀತಿ ಗ್ರಾಮ ವಾಸ್ತವ್ಯ ನಡೆಸಿದರು.
ಈಗಲೂ ಆ ಗ್ರಾಮ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿದೆ. ಗ್ರಾಮ ವಾಸ್ತವ್ಯಕ್ಕೆ ವ್ಯಯಿಸುವ ಹಣವನ್ನು ಆ ಗ್ರಾಮಕ್ಕೆ ನೀಡಿದರೆ ಗ್ರಾಮ ಅಭಿವೃದ್ಧಿ ಆದೀತು ಎಂದರು. ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆ ದ.ಕ. ಜಿಲ್ಲೆಗೂ ಬರಗಾಲ ಎದುರಾಗಿತ್ತು. ಜಿಲ್ಲೆಯ ಬರಗಾಲಕ್ಕೆ ಕಾಂಗ್ರೆಸ್ ಮಾಡಿದ ಶಾಪ ಕಾರಣ ಎಂದ ನಳಿನ್ ನೇತ್ರಾವತಿ ಬರಿದಾಗಲು ಕಾಂಗ್ರೆಸ್ ಮಾಡಿದ ಅವ್ಯವಹಾರ ಕಾರಣ ಎಂದು ತಿಳಿಸಿದರು.