ಮಂಗಳೂರು, ಜೂ30(Daijiworld News/SS): ನಗರದ ಹೊರವಲಯದ ಎನ್ಐಟಿಕೆ ಬೀಚ್ ಸಮುದ್ರ ಕಿನಾರೆಯಲ್ಲಿ ಅಂದಾಜು 6 ಮೀಟರ್ ಉದ್ದದ ಮೀನಿನ ಕಳೇಬರ ಪತ್ತೆಯಾಗಿದೆ.
ತೀರದಲ್ಲಿ ಅರೆಜೀವಾವಸ್ಥೆಯಲ್ಲಿದ್ದ ಮೀನನ್ನು ಮೇಲೆತ್ತುವಷ್ಟರಲ್ಲಿ ಮೃತಪಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೀನು ದಡ ಸೇರಿರುವ ಮಾಹಿತಿ ಮೇರೆಗೆ ಬೀಚ್ ಪ್ರವಾಸಿಗರ ಸುರಕ್ಷತೆ ಕಾರ್ಯನಿರ್ವಹಿಸುವ ಹೋಂಗಾರ್ಡ್ಗಳು, ಟೂರಿಸ್ಟ್ ಮಿತ್ರ ಕಾರ್ಯಕರ್ತರು, ವಲಯ ಅರಣ್ಯಾಧಿಕಾರಿ ಶ್ರೀಧರ್ ಹಾಗೂ ಮೀನುಗಾರಿಕಾ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವೇಲ್ಶಾರ್ಕ್ ತಳಿಯ ಈ ಮೀನಿನ ಕಳೇಬರವನ್ನು ಅಧ್ಯಯನ ಉದ್ದೇಶಕ್ಕೆ ನೀಡಬೇಕೆಂದು ಮಂಗಳೂರಿನ ಮೀನುಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಕೇಳಿದ ಹಿನ್ನಲೆ, ಮರಣೋತ್ತರ ಪರೀಕ್ಷೆ ನಡೆಸಿ ಅವರಿಗೆ ಹಸ್ತಾಂತರಿಸಲಾಗಿದೆ ಎಂದು ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ತಿಪ್ಪೇಸ್ವಾಮಿ ತಿಳಿಸಿದ್ದಾರೆ.