ಉಡುಪಿ, ಅ. 07 (DaijiworldNews/TA): ತಾಲೂಕಿನ 80 ಬಡಗುಬೆಟ್ಟು ಗ್ರಾಮದ ರಾಜೀವ್ ನಗರ ಬಸ್ ನಿಲ್ದಾಣದ ಹತ್ತಿರ ನಡೆದ ಪೊಲೀಸ್ ದಾಳಿಯಲ್ಲಿ ಜುಗಾರಿ ಆಡುತ್ತಿದ್ದ ನಾಲ್ವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ಪಿ.ಎಸ್.ಐ ಅನೀಲ್ ಕುಮಾರ್ ಬಿ.ಎಂ ಹಾಗೂ ಸಿಬ್ಬಂದಿ ಪಡೆದ ಗುಪ್ತ ಮಾಹಿತಿಯ ಆಧಾರದ ಮೇಲೆ ಸ್ಥಳಕ್ಕೆ ದಾಳಿ ನಡೆಸಿ, ಅಂದರ್-ಬಾಹರ್ ಇಸ್ಪೀಟ್ ಜುಗಾರಿ ಆಟದಲ್ಲಿ ತೊಡಗಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಜಯಂತ್ ಪೂಜಾರಿ (37), ಶರಣಪ್ಪ ಪೂಜಾರಿ (45), ಈಶ (36) ಹಾಗೂ ಹಾಲೇಶ (35) ಬಂಧಿತರು ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ರೂ. 2,100 ನಗದು ಹಾಗೂ 52 ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.