ಮಂಗಳೂರು,ಜೂ30(DaijiworldNews/AZM):ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬಗಂಬಿಲದಲ್ಲ್ಲಿ ಯುವತಿಗೆ ಚಾಕುವಿನಿಂದ ಇರಿದ ಯುವಕ ಬಳಿಕ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಹಾಡುಹಗಲೇ ಜನರ ಮಧ್ಯದಲ್ಲೇ ನಡೆದಿದ್ದು, ಪ್ರಕರಣದಲ್ಲಿ ಯುವತಿಯನ್ನು ರಕ್ಷಿಸಲು ಮುಂದಾದ ಸಿಸ್ಟರ್ ನಿಮ್ಮಿ ಸ್ಟೀಫನ್ ಎಂಬವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.
ಉಳ್ಳಾಲದ ಬಗಂಬಿಲದಲ್ಲಿ ಯುವಕ ಯುವತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸುವಾಗ ಹತ್ತಕ್ಕೂ ಅಧಿಕ ಜನರು ಸುತ್ತಮುತ್ತಲೂ ಇದ್ದರು. ಮನೆಯ ಮಹಡಿ ಮೇಲೆ ನಿಂತವರು ಘಟನೆಯ ವಿಡಿಯೋ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಯುವತಿಯನ್ನು ರಕ್ಷಣೆ ಮಾಡಲು ಮುಂದಾಗಿದ್ದು, ನರ್ಸ್ ನಿಮ್ಮಿ ಸ್ಟಿಫನ್.
ನಿಮ್ಮಿ ಯುವತಿ ರಕ್ಷಣೆ ಮಾಡಲು ಹೋಗುತ್ತಿರುವಾಗ ಬೇಡ ನಿಮ್ಮಿ ಬೇಡ ಎಂದು ಜನರು ಕೂಗುತ್ತಿರುವುದು ವಿಡಿಯೋದಲ್ಲಿ ಕೇಳುತ್ತದೆ. ಯುವಕನ ಕೈಯಲ್ಲಿ ಚಾಕುವಿದ್ದರೂ ಹೆದರದೇ ನಿಮ್ಮಿ ಯುವತಿಯ ರಕ್ಷಣೆಗೆ ಮುಂದಾಗಿದ್ದಾರೆ.
ದೇರಳಕಟ್ಟೆಯಲ್ಲಿರುವ ಜೆಕೆಎಸ್ಎಚ್ ಚಾರಿಟಬಲ್ ಆಸ್ಪತ್ರೆಯ ಸ್ಟಾಫ್ ನರ್ಸ್ ನಿಮ್ಮಿ ಸ್ಪಿಫನ್ ಕಾರ್ಯಕ್ಕೆ ಈಗ ವ್ಯಾಪಕ ಪ್ರಶಂಸೆ ಸಿಕ್ಕಿದೆ. ನಿಮ್ಮಿಯ ಸಾಹಸವನ್ನು ನಿಟ್ಟೆ ವಿಶ್ವವಿದ್ಯಾಲಯ ಶ್ಲಾಘಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಮಾಧ್ಯಮಗಳ ಜೊತೆ ಮಾತನಾಡಿರುವ ಕೇರಳ ಮೂಲದ ನಿಮ್ಮಿ ಸ್ಟಿಫನ್ ಅವರು, 'ಹಲವಾರು ಜನರು ನನ್ನ ಹೆಸರು ಕೂಗಿ ಜಾಗ್ರತೆ ಇರಲಿ ಎಂದರೆ ಇನ್ನೂ ಕೆಲವರು ಹೋಗಬೇಡ ಎಂದು ಕೂಗುತ್ತಿದ್ದರು. ಆ ಕ್ಷಣದಲ್ಲಿ ನಾನು ಬೇರೆನೂ ಆಲೋಚಿಸಲಿಲ್ಲ. ಯುವತಿ ಕೆಳಗೆ ಬಿದ್ದಿದ್ದಾಳೆ. ಅವಳನ್ನು ರಕ್ಷಣೆ ಮಾಡುವುದು ಹೇಗೆ ಎಂಬುದು ನನ್ನ ಗುರಿಯಾಗಿತ್ತು' ಎಂದು ಹೇಳಿದ್ದಾರೆ.
ನಿಮ್ಮಿ ಸ್ಟಿಫನ್ ಅವರು ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ನರ್ಸಿಂಗ್ ಕೋರ್ಸ್ ಮುಗಿಸಿ 10 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದಾರೆ. 'ಅಪರಾಧ ಪ್ರಕರಣಗಳಲ್ಲಿ ಗಾಯಗೊಂಡವರನ್ನು ಉಪಚರಿಸಿದ್ದೇನೆ. ಆದರೆ, ನನ್ನ ಕಣ್ಣಮುಂದೆಯೇ ಅಪರಾಧ ಕೃತ್ಯ ನಡೆದಿರುವುದು ಇದೇ ಮೊದಲು' ಎಂದು ನಿಮ್ಮಿ ತಿಳಿಸಿದ್ದಾರೆ.