ಮಂಗಳೂರು, ಜೂ 30 (Daijiworld News/SM): ಲೋಕಸಭೆ ಚುನಾವಣೆಯಲ್ಲಿ ಮಿಥುನ್ ರೈ ಸೋತರೆ ಕುದ್ರೋಳಿ ಕ್ಷೇತ್ರಕ್ಕೆ ತಾನು ಭೇಟಿಯೇ ನೀಡಲ್ಲ ಎಂದಿದ್ದ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಇದೀಗ ತಮ್ಮ ವಚನ ಮರೆತಿದ್ದಾರೆ. ಜೂನ್ 30ರಂದು ಕ್ಷೇತ್ರಕ್ಕೆ ಭೇಟಿ ನೀಡಿದ್ದು, ತನ್ನನ್ನು ಕ್ಷಮಿಸು ಎಂದು ಶ್ರೀ ಗೋಕರ್ಣನಾಥ ದೇವರಲ್ಲಿ ಕ್ಷಮೆಯಾಚಿಸಿದ್ದಾರೆ.
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ರವಿವಾರ ಸಂಜೆ ಪೂಜಾರಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಹಾಗೂ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಗೋಕರ್ಣನಾಥ ದೇವರ ಮುಂದೆ ನಿಂತು ಮಾತನಾಡಿದ ಜನಾರ್ಧನ ಪೂಜಾರಿ ನಾನು ತಪ್ಪು ಮಾಡಿದ್ದೇನೆ. ನನ್ನನ್ನು ಕ್ಷಮಿಸಿ ಎಂದು ಮೊರೆಯಿಟ್ಟರು.
ಈ ಬಾರಿಯ ಲೋಕಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಗೆಲ್ಲದಿದ್ದರೆ ನಾನು ಕುದ್ರೋಳಿ ಗೋಕರ್ಣನಾಥ ದೇವಾಲಯ, ಮಸೀದಿ ಹಾಗೂ ಚರ್ಚ್ ಗಳಿಗೆ ಹೋಗುವುದಿಲ್ಲ ಎಂದು ಜನಾರ್ಧನ ಪೂಜಾರಿ ಹೇಳಿದ್ದರು.
ಆದರೆ ಇಂದು ಜನಾರ್ಧನ ಪೂಜಾರಿ ಕುದ್ರೋಳಿ ದೇವಸ್ಥಾನಕ್ಕೆ ಸುಮಾರು 3 ತಿಂಗಳ ಬಳಿಕ ಭೇಟಿ ನೀಡಿದ್ದಾರೆ. ಗೋಕರ್ನನಾಥ ಸ್ವಾಮಿಯಲ್ಲಿ ತನ್ನನ್ನು ಕ್ಷಮಿಸು ಎಂದು ನಿವೇದಿಸಿಕೊಂಡಿದ್ದಾರೆ.