ಬಂಟ್ವಾಳ ಡಿ 10: ಹಿರಿಯ ರಂಗನಟಿ, ಮಾಜಿ ರಾಜ್ಯಸಭಾ ಸದಸ್ಯೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದೆ ಬಿ.ಜಯಶ್ರೀ ಅವರು ಡಿ 9 ರ ಶನಿವಾರ ಸಂಜೆ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿದರು.
ತುಳು ಬದುಕು ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದ ಅವರು ಹಿಂದೆ ತುಳುನಾಡಿನಲ್ಲಿ ದಿನ ಬಳಕೆಯಲ್ಲಿದ್ದ ವಸ್ತುಗಳ ಅಪಾರ ಸಂಗ್ರಹವನ್ನು ಕಂಡು ನಿಬ್ಬೆರಗಾದರು. ಕೇಂದ್ರದ ಅಧ್ಯಕ್ಷ ಪ್ರೊ. ತುಕರಾಂ ಪೂಜಾರಿಯವರು ವಸ್ತುಸಂಗ್ರಹಾಲಯದಲ್ಲಿನ ವಸ್ತುಗಳ ಹಿನ್ನಲೆ, ಅವುಗಳ ವೈಶಿಷ್ಠ್ಯತೆ, ತುಳುನಾಡಿನ ಸಂಸ್ಕೃತಿಯಲ್ಲಿ ಅವುಗಳು ಹಾಸುಹೊಕ್ಕಾಗಿದ್ದ ಬಗ್ಗೆ ಮಾಹಿತಿ ನೀಡಿದರು. ತುಳು ಭಾಷೆ ಹಾಗೂ ಸಂಸ್ಕೃತಿಗೆ ಪೂರಕವಾಗಿ ಭೌತಿಕ ವಸ್ತುಗಳು ಬೆಳೆದು ಬಂದ ರೀತಿಯನ್ನು ಪರಿಚಯಿಸಿದರು. ರಾಣಿ ಅಬ್ಬಕ್ಕ ಚಿತ್ರಗ್ಯಾಲರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಜಯಶ್ರೀ ತುಳುನಾಡಿನ ಚರಿತ್ರೆಯೇ ಇಲ್ಲಿ ಹರಿಯುತ್ತಿದೆ, ಎಲ್ಲರು ಇದನ್ನು ನೋಡಿ ಅರ್ಥೈಸಿಕೊಂಡು ಪರಂಪರೆಯನ್ನು ಉಳಿಸಬೇಕು ಎಂದು ಉದ್ಗರಿಸಿದರು. ಪ್ರೊ. ತುಕರಾಮ ಪೂಜಾರಿಯವರ ಶ್ರಮ ಇಲ್ಲಿ ಕಾಣುತ್ತಿದೆ. ವಸ್ತುಗಳ ಮೂಲಕ ನಮ್ಮ ಸಂಸ್ಕೃತಿ ಪರಂಪರೆಯನ್ನು ಅವರು ತಿಳಿಸಿ ಕೊಡುತ್ತಿದ್ದಾರೆ. ಇಂತವರಿಂದಾಗಿ ನಮ್ಮ ದೇಶ ಬದುಕಿದೆ ಎಂದರು. ಈ ಸಂದರ್ಭ ಬಿ.ಜಯಶ್ರೀ ಅವರ ಪತಿ ಕೆ. ಆನಂದರಾವ್, ಶಶಿಅಡಪ, ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಹಾಜರಿದ್ದರು.