ವಿಟ್ಲ, ಜು ೦೧ (Daijiworld News/SM): ವಿಟ್ಲದ ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತ್ ಗಳು ಹಾಗೂ ವಿವಿಧ ಧಾರ್ಮಿಕ ಕೇಂದ್ರಗಳ ಧರ್ಮಗುರುಗಳ ನೇತೃತ್ವದಲ್ಲಿ ಜಲ ಸಂರಕ್ಷಣೆ ಮತ್ತು ಜಲ ಮರುಪೂರಣ ಹಾಗೂ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಾಣಿಲ ಗ್ರಾಮ ಪಂಚಾಯಿತಿ ಮತ್ತು ಪೆರುವಾಯಿ ಗ್ರಾಮ ಪಂಚಾಯಿತ್, ಶ್ರೀಧಾಮ ಮಾಣಿಲ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನ, ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ, ಕುಕ್ಕಾಜೆ ಕಾಳಿಕಾಂಬಾ ಆಂಜನೇಯ ದೇವಸ್ಥಾನ, ಪೆರುವಾಯಿ ಜುಮಾ ಮಸೀದಿ, ಮಂಗಳೂರು ಅಲೋಶಿಯಸ್ ಕಾಲೇಜು ಹಾಗೂ ವಿವಿಧ ಸಂಘಸಂಸ್ಥೆಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ, ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್ ಹಾಗೂ ಪೆರುವಾಯಿ ಜುಮಾ ಮಸೀದಿ ಧರ್ಮಗುರು ಮಹಮ್ಮದ್ ಶರೀಫ್ ಮದನಿ ಅವರು ಜತೆಯಾಗಿ ಮಾಣಿಲ ಕ್ಷೇತ್ರದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.
ಮಾಣಿಲ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಪ್ರತಿಯೊಂದು ಧರ್ಮ, ಧರ್ಮಗ್ರಂಥಗಳನ್ನು ಪ್ರೀತಿಸುವುದರಲ್ಲಿ ನಿಜವಾದ ಮಾನವೀಯ ಮೌಲ್ಯವಿದೆ. ಜಗತ್ತಿನಲ್ಲಿ ಜಲ ಕೊರತೆಯಿಂದ ಬಳಲುತ್ತಿದೆ. ಜನ ಜೀವನದ ಮೂಲವೆನಿಸಿದ ಜಲದ ಸಂರಕ್ಷಣೆ ಅತ್ಯವಶ್ಯಕವಾಗಿದೆ. ಆದರ್ಶ ಗ್ರಾಮಗಳನ್ನಾಗಿ ರೂಪಿಸುವ ಪ್ರಯತ್ನ ಪ್ರಯತ್ನ ಪಂಚಾಯಿತಿಗಳಲ್ಲಿ ನಡೆಯಬೇಕು ಎಂದು ಹೇಳಿದರು.
ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ವಿಶಾಲ್ ಮೋನಿಸ್ ಅವರು ಮಾತನಾಡಿ ಪಂಚಭೂತಗಳಿಗೆ ಧರ್ಮಬೇಧವಿಲ್ಲ. ಮಾನವರ ಮೂರ್ಖತನ, ಅತೀರೇಕದಿಂದ ಪ್ರಕೃತಿಯ ಸಮತೋಲನ ತಪ್ಪಿದೆ. ಪ್ರಕೃತಿ ಉಳಿಸುವ ಕಾರ್ಯಗಳು ನಡೆಯಬೇಕು ಎಂದರು.
ಪೆರುವಾಯಿ ಜುಮಾ ಮಸೀದಿ ಧರ್ಮಗುರು ಮಹಮ್ಮದ್ ಶರೀಫ್ ಮದನಿ ಮಾತನಾಡಿ ನೀರು ಜಗತ್ತಿನ ಉಳಿವಿಗೆ ಅವಶ್ಯಕ. ನೀರು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪರಿಸರ ಉಳಿದಾಗ ನೀರು ಉಳಿಯುತ್ತದೆ ಎಂದರು.
ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಕೈ ಜೋಡಿಸಿದರು. ಮಾಣಿಲ ಶ್ರೀಧಾಮ ರಸ್ತೆ, ಕಾಳಿಕಾಂಬಾ ಆಂಜನೇಯ ದೇವಸ್ಥಾನ ರಸ್ತೆ ಬದಿ ಗಿಡ ನೆಡಲಾಯಿತು. ಮಾಣಿಲ ಗ್ರಾಮ ಪಂಚಾಯಿತಿ ಕಚೇರಿ ಬಳಿ ಕೊಳವೆ ಬಾವಿಗೆ ನೀರು ಮರುಪೂರಣ ಘಟಕ, ಪೆರುವಾಯಿ ಗ್ರಾಮ ಪಂಚಾಯಿತಿ ಕಚೇರಿ ಬಳಿ ಕೊಳವೆ ಬಾವಿಗೆ ನೀರು ಮರುಪೂರಣ ಘಟಕ ಸ್ಥಾಪಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಣಿಲ ಗ್ರಾಮ ಪಂಚಾಯಿತ್ ಅಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಪೆರುವಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಲ್ಫ್ ಡಿ ಸೋಜ, ಸಂತ ಅಲೋಶಿಯಸ್ ಕಾಲೇಜಿನ ಕಿರಣ್, ಫಿಲೋಮಿನ, ಮಾಣಿಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶೋಕ್ ಉಪಸ್ಥಿತರಿದ್ದರು.