ಮಂಗಳೂರು, ಜು 01 (Daijiworld News/SM): ಜಾನುವಾರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ದೊರೆತ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಕಸಬಾ ಬೆಂಗ್ರೆ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.
ಕಸಬಾ ಬೆಂಗ್ರೆ ನಿವಾಸಿ ಅಬ್ದುಲ್ ಕಬೀರ್ ಯಾನೆ ಪಾರಿವಾಳ ಕಬೀರ್(31) ಬಂಧಿತ ಆರೋಪಿ. ಈತನ ವಿರುದ್ಧ ವಿವಿಧ ಠಾಣೆಯಲ್ಲಿ ಸುಮಾರು ೧೪ ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರ ಉಳ್ಳಾಲ, ಕಂಕನಾಡಿ, ಬಜ್ಪೆ, ಪಣಂಬೂರು, ಮಂಗಳೂರು ದಕ್ಷಿಣ ಠಾಣೆಗಳಲ್ಲಿ ಜಾನುವಾರು ಕಳವು ಪ್ರಕರಣಗಳು ದಾಖಲಾಗಿವೆ. ಮಂಗಳೂರು ಉತ್ತರ, ಉಪ್ಪಿನಂಗಡಿ, ಮಂಗಳೂರು ಪೂರ್ವ ಪೊಲೀಸ್ ಠಾಣೆಗಳಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ. ಮಂಗಳೂರು ನಗರದ ಪಾಂಡೇಶ್ವರ ದೇವಸ್ಥಾನದ ದನ ಕಳವು ಪ್ರಕರಣದಲ್ಲಿ ಈತ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯು ಮಂಗಳೂರು ಉತ್ತರ, ಮಂಗಳೂರು ಪೂರ್ವ ಠಾಣೆಗಳಲ್ಲಿನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಬಳಿಕ ತಲೆಮರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತ್ತು. ಆರೋಪಿಯನ್ನು ಕಸಬಾ ಬೆಂಗ್ರೆಯಿಂದ ವಶಕ್ಕೆ ಪಡೆದು ಉಳ್ಳಾಲ ಠಾಣೆಗೆ ಹಸ್ತಾಂತರಿಸಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.