ಬೆಳ್ತಂಗಡಿ, ಜು 01 (Daijiworld News/MSP): ಉಜಿರೆ ಹಳೆಪೇಟೆ ನಿವಾಸಿ ಗೋಣಿ ಇಬ್ರಾಹಿಂ ಅವರ ಮಗ ಅಲ್ತಾಫ್ ವಾಫೀರ್ (25) ಭಾನುವಾರ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.
ಇವರು ತಮ್ಮ ಮನೆಯಲ್ಲಿ ಸ್ಪ್ರೇ ಗನ್ ಬಳಸಿ ಕಾರು ತೊಳೆಯುತ್ತಿದ್ದರು. ಬಳಿಕ ಪಂಪ್ ಸ್ವಿಚ್ ಆಫ್ ಮಾಡಿ ಪ್ಲಗ್ ತೆಗೆಯುವ ಸಂದರ್ಭದಲ್ಲಿ ಒದ್ದೆ ಕೈಗೆ ಮೂಲಕ ವಿದ್ಯುತ್ ಆಘಾತವಾಗಿದೆ. ಈ ಸಂದರ್ಭ ಅಣ್ಣನನ್ನು ಕೂಗಿ ಸ್ವಿಚ್ ತೆಗೆಯುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ನೀರಿನ ತೇವಾಂಶಕ್ಕೆ ವಿದ್ಯುತ್ ಒಮ್ಮೆಲೆ ಪ್ರವಹಿಸಿದ್ದರಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದಾರೆ. ಆ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು.
ಕರಾಟೆ ಬ್ಲ್ಯಾಕ್ ಬೆಲ್ಟ್ ಚಾಂಪಿಯನ್ ಆಗಿದ್ದ ಇವರು ಉತ್ತಮ ಸಂಘಟಕರಾಗಿದ್ದರು. ಉಜಿರೆ ಅಲ್ ಅಮೀನ್ ಯಂಗ್ ಮೆನ್ಸ್ ಸಂಘಟನೆಯ ಅಧ್ಯಕ್ಷರಾಗಿದ್ದರು. 2 ತಿಂಗಳ ಹಿಂದೆಯಷ್ಟೇ ಇವರು ವಿವಾಹವಾಗಿದ್ದರು.