ಉಳ್ಳಾಲ,ಜು 01 (Daijiworld News/MSP): 'ಭಗ್ನಪ್ರೇಮಿ ರೌಡಿಶೀಟರ್ ಸುಶಾಂತ್ (28)ನಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿರುವ ಬಗಂಬಿಲದ ನಿವಾಸಿ ವಿದ್ಯಾರ್ಥಿನಿ ದೀಕ್ಷಾ ಆರೋಗ್ಯ ಸ್ಥಿತಿಯಲ್ಲಿ ಭಾನುವಾರ ಕೊಂಚ ಚೇತರಿಕೆ ಕಂಡುಬಂದಿದೆ’ ಎಂದು ಆಸ್ಪತ್ರೆಯಲ್ಲಿದ್ದ ಸಂಬಂಧಿಕರು ತಿಳಿಸಿದ್ದಾರೆ.
'ಚಿಂತಾಜನಕ ಸ್ಥಿತಿಯಲ್ಲಿದ್ದ ದೀಕ್ಷಾ ಕಳೆದ ಎರಡು ದಿನಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಭಾನುವಾರ ಬೆಳಿಗ್ಗೆ ದೀಕ್ಷಾ ಕೈಕಾಲುಗಳನ್ನು ಅಲ್ಲಾಡಿಸಿದ್ದಾಳೆ’ ಎಂದವರು ತಿಳಿಸಿದ್ದಾರೆ. ವಿದ್ಯಾರ್ಥಿನಿಗೆ ಭಾನುವಾರ ಎರಡು ಯುನಿಟ್ ರಕ್ತ ನೀಡಲಾಗಿದೆ. ಸಾಮಾನ್ಯವಾಗಿ ಮಹಿಳೆಯರಲ್ಲಿ 11ರಿಂದ 13 ಅಂಶ ಹಿಮೋಗ್ಲೋಬಿನ್ ಬೇಕಿದ್ದರೂ ದೀಕ್ಷಾಳಲ್ಲಿ ಈಗ 9 ಅಂಶವಿದ್ದು, ಸ್ವಲ್ಪ ಇಳಿಮುಖವಾಗಿದೆ. ತಜ್ಞರ ಏಳು ಮಂದಿಯ ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದೆ.
ಇನ್ನು ವಿದ್ಯಾರ್ಥಿನಿಗೆ ಚೂರಿಯಿಂದ ಇರಿದು ತಾನೂ ಕತ್ತು ಸೀಳಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಆರೋಪಿ ಯುವಕನನ್ನು ಅದೇ ಆಸ್ಪತ್ರೆಯ ಮಾನಸಿಕ ಚಿಕಿತ್ಸಾ ವಿಭಾಗದಲ್ಲಿರಿಸಿ ಪೊಲೀಸ್ ಬಂದೋಬಸ್ತಿನಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಮಂಗಳವಾರ ಅಥವಾ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಸಾಧ್ಯತೆ ಇದ್ದು ಪೊಲೀಸ್ ವಶಕ್ಕೆ ಪಡೆದು ಶೀಘ್ರವೇ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ತಿಳಿಸಿವೆ.
ತಂದೆಯನ್ನು ಬರಲು ಹೇಳಿದ್ದ ದೀಕ್ಷಾ:
ದೀಕ್ಷಾ ಕಾರ್ಕಳ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಘಟನೆ ನಡೆಯುವ ದಿನ ಅಂದರೆ ಶುಕ್ರವಾರ ಮನೆಗೆ ಬರುವ ಮುಂಚೆ ತಂದೆಗೆ ಕರೆ ಮಾಡಿ, ನಾನು ಮನೆಗೆ ಬರುತ್ತಿದ್ದೇನೆ. ನೀವು ಬಸ್ ಸ್ಟಾಂಡ್ ಗೆ ಬಂದು ಕರೆದುಕೊಂಡು ಹೋಗಿ ಎಂದು ಹೇಳಿದ್ದಾಳೆ. ಆದರೆ ಕೆಲಸದ ಒತ್ತಡದಲ್ಲಿದ್ದ ತಂದೆ, ಮಗಳ ನಡೆದುಕೊಂಡು ಮನೆಗೆ ಬರಬಹುದು ಎಂದು ಯೋಚಿಸಿ ಸುಮ್ಮನಾಗಿದ್ದಳು. ಆದರೆ ಬಳಿಕ ನಡೆದ ಘಟನೆ ತಂದೆಗೆ ಶಾಕ್ ನೀಡಿದೆ.