ಕಾಸರಗೋಡು,ಜು 01 (Daijiworld News/MSP): ಕಾಸರಗೋಡಿನಲ್ಲಿ ಚೂರಿ ಇರಿತದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ನಾಲ್ಕು ವರ್ಷಗಳ ಹಿಂದೆ ಕಾಸರಗೋಡಿನಲ್ಲಿ ನಡೆದ್ದಿದ ಜೈನುಲ್ ಆಬಿದ್ ಕೊಲೆ ಪ್ರಕರಣದ ಮೂರನೇ ಆರೋಪಿ ಉದಯಗಿರಿಯ ಪ್ರಶಾಂತ್ ಗೆ (33) ಭಾನುವಾರ ತಡರಾತ್ರಿ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಲಾಗಿದೆ.
ನಗರದಲ್ಲಿ ತಲೆ ಹೊರೆ ಕಾರ್ಮಿಕನಾಗಿದ್ದ ಪ್ರಶಾಂತ್ ರಾತ್ರಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಸರಕಾರಿ ಕಾಲೇಜು ಪರಿಸರದ ರಸ್ತೆಯಲ್ಲಿ ಕಾರಿನಲ್ಲಿ ಬಂದ ತಂಡವು ಬೈಕ್ ಗೆ ಡಿಕ್ಕಿ ಹೊಡೆಸಿ ಬಳಿಕ ಪ್ರಶಾಂತ್ ಮೇಲೆ ಮಾರಾಕಾಸ್ತ್ರದಿಂದ ದಾಳಿ ನಡೆಸಿದೆ. ಗಾಯಗೊಂಡ ವಿದ್ಯಾನಗರ ನೆಲ್ಕಲ ದ ಪ್ರಶಾಂತ್ ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಶಾಂತ್ 2014 ರ ಡಿಸಂಬರ್ 22 ರಂದು ಎಸ್.ಡಿ.ಪಿ.ಐ ಕಾರ್ಯಕರ್ತನಾಗಿದ್ದ ತಳಂಗರೆಯ ಆಬಿದ್ ನನ್ನ ನಗರದ ಟ್ರಾಫಿಕ್ ಜಂಕ್ಷನ್ ಸಮೀಪದ ಅಂಗಡಿಗೆ ನುಗ್ಗಿ ಕೊಲೆಗೈದ ಪ್ರಕರಣದ ಮೂರನೇ ಆರೋಪಿಯಾಗಿದ್ದಾನೆ.
ಆರು ಮಂದಿ ಎಸ್.ಡಿ.ಪಿ.ಐ ಕಾರ್ಯಕರ್ತರ ವಿರುದ್ಧ ಕಾಸರಗೋಡಿನ ನಗರ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.