ಮಂಗಳೂರು, ಜು 01(Daijiworld News/SM): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜೂನ್ 30ರಂದು ಲ್ಯಾಂಡಿಂಗ್ ಸಮಯದಲ್ಲಿ ವಿಮಾನ ಸ್ಕಿಡ್ ಆಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳು ಸರಿಯಾಗಿ ಲ್ಯಾಂಡ್ ಆಗುತ್ತಿವೆ. ರವಿವಾರ ನಡೆದಿರುವ ಘಟನೆಗೆ ವಿಮಾನ ನಿಲ್ದಾಣ ಪ್ರಾಧಿಕಾರದ ಯಾವುದೇ ಲೋಪವಿಲ್ಲ. ವಿಮಾನದಲ್ಲಿನ ದೋಷ ಅಥವಾ ಪೈಲೆಟ್ ನ ಅಚಾತುರ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಈ ಹಿಂದೆ 2010ರಲ್ಲಿ ನಡೆದಿದ್ದ ವಿಮಾನ ದುರಂತಕ್ಕೆ ಪೈಲೆಟ್ ಅಚಾತುರ್ಯವೇ ಕಾರಣವಾಗಿತ್ತು. ಇದೇ ಕಾರಣಕ್ಕೆ ರವಿವಾರ ನಡೆದ ಘಟನೆಯ ಬಗ್ಗೆ ತನಿಖೆ ನಡೆಸಲು ಸೂಚಿಸಲಾಗಿದೆ ಎಂದರು. ವಿಮಾನ ನಿಲ್ದಾಣ ಖಾಸಗೀಕರಣ ವಿಚಾರದ ಬಗ್ಗೆ ಮಾತನಾಡಿದ ಅವರು ಬಜಪೆ ವಿಮಾನ ನಿಲ್ದಾಣದ ರನ್ ವೇಯನ್ನು ಸುಮಾರು 120 ಕೋಟಿಯಲ್ಲಿ ವಿಸ್ತರಣೆ ಮಾಡಲು ಸರ್ಕಾರ ತಯಾರಿದೆ.
ಆದರೆ, ಕೇಂದ್ರ ಸರ್ಕಾರ ವಿಮಾನ ನಿಲ್ದಾಣವನ್ನ ಖಾಸಗೀಕರಣ ಮಾಡಲು ಹೊರಟಿರುವುದರಿಂದ ಹಾಗಾಗಿ ನಾವು ಖರ್ಚು ಮಾಡಿ ಯಾರೋ ಒಬ್ಬ ಖಾಸಗಿ ವ್ಯಕ್ತಿಗೆ ಕೊಡೊದಾದ್ರೆ ಚರ್ಚೆ ಮಾಡ್ಬೇಕಾಗಿದೆ. ಇಲ್ಲವಾದ್ರೆ ಯಾರು ಖಾಸಗೀಯವ್ರು ತೆಗೆದುಕೊಳ್ತಾರೋ ಅವ್ರು ಬಿಸಿನೆಸ್ ದೃಷ್ಟಿಯಿಂದ ನೋಡದೆ ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕೊಡಬೇಕು. ಹಾಗೆಯೇ ರಾಜ್ಯ ಸರ್ಕಾರದ ಜೊತೆಗೂ ಖಾಸಗೀಕರಣದ ವಿಚಾರವಾಗಿ ಚರ್ಚಿಸಬೇಕು ಎಂದರು.