ಕಾಸರಗೋಡು, ಅ. 22 (DaijiworldNews/ TA): ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿದ ಹಿನ್ನೆಲೆಯಲ್ಲಿ ಮನೆಗೆ ತಂದು ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ವ್ಯಕ್ತಿ ಜೀವಂತವಾಗಿರುವುದು ತಿಳಿದು ಬಂದಿದೆ. ಅವರನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಂಬಳೆ ಕಂಚಿಕಟ್ಟೆ ರಾಮನಗರ ನಿವಾಸಿ ರಾಮ್ ನಾಥ್ ಗಟ್ಟಿ (70) ಅವರಿಗೆ ಒಂದು ವಾರದ ಹಿಂದೆ ಮನೆಯಲ್ಲಿ ಅಸೌಖ್ಯ ಕಾಣಿಸಿಕೊಂಡಿತ್ತು. ಅವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ಬಳಿಕ ಮಂಗಳೂರು ವೆನ್ಸಾಕ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಬಳಿಕ ಎರಡು ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಕೊನೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ ಕಾರಣ ಮನೆಗೆ ಕರೆತಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಯಿತು.
ಸಂಬಂಧಿಕರು ಹಾಗೂ ಸ್ಥಳೀಯರು ಮನೆಯಲ್ಲಿ ಸೇರಿದ್ದರು. ಕುಂಟಂಗೇರ ಸ್ಮಶಾನಕ್ಕೆ ಕೊಂಡೊಯ್ಯಲು ಹೊರಡುತ್ತಿದ್ದಂತೆ ರಾಮನಾಥ್ ಅವರ ದೇಹ ಕಂಪಿಸುತ್ತಿರುವುದನ್ನು ಸಂಬಂಧಿಕರು ಗಮನಿಸಿದರು. ಅವರನ್ನು ಕೂಡಲೇ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.