ಬೆಳ್ತಂಗಡಿ, ಅ. 22 (DaijiworldNews/ TA): ಕಳೆದೆರಡು ದಿನಗಳ ಹಿಂದೆ ಪಜಿರಡ್ಕ ದೇವಸ್ಥಾನದ ಬಳಿ ನದಿಯಲ್ಲಿ ಕಾಣಸಿಕ್ಕಿದ್ದ ಮೊಸಳೆಯು ಅ. 20ರ ರಾತ್ರಿ ದೇವಸ್ಥಾನದಿಂದ 100 ಮೀ. ದೂರದಲ್ಲಿರುವ ಕಿರು ಸೇತುವೆ ಪರಿಸರದಲ್ಲಿ ಓಡಾಟ ನಡೆಸುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ.

ಅ. 19ರಂದು ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಪರಿಸರದಲ್ಲಿ ಮತ್ತೆ ಮೊಸಳೆ ಇರುವುದನ್ನು ದೇವಸ್ಥಾನದ ಭಕ್ತರು ಕಂಡಿದ್ದರು. ಬಳಿಕ ಮೊಸಳೆಯು ನದಿಯಲ್ಲಿ ಮುಂದೆ ಹೋಗಿತ್ತು. ಆದರೆ 20ರಂದು ರಾತ್ರಿ ಗ್ರಾಮದ ಇನ್ನೊಂದು ಭಾಗಕ್ಕೆ ಸಂಪರ್ಕ ಕಲ್ಪಿಸುವ ಕಿಂಡಿ ಅಣೆಕಟ್ಟು ಸಹಿತ ಕಿರುಸೇತುವೆಯ ಮೇಲೆ ಮೊಸಳೆ ಓಡಾಟ ನಡೆಸುತ್ತಿದ್ದು, ಬಳಿಕ ನದಿಗೆ ಇಳಿದಿದೆ. ಸೇತುವೆ ಪರಿಸರದಲ್ಲಿ ಮೊಸಳೆ ಓಡಾಡುತ್ತಿರುವುದನ್ನು ಸ್ಥಳೀಯರು ಮೊಬೈಲ್ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ.
ನಿರಂತರ ಮಳೆಯ ಕಾರಣದಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಹೀಗಾಗಿ ಮೊಸಳೆಯು ನೀರಿನ ಮೂಲಕ ದಿಡುಪೆ ಅಥವಾ ಚಾರ್ಮಾಡಿ ಭಾಗದಿಂದ ಆಗಮಿಸಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಸಂಶಯಿಸಿದ್ದಾರೆ. ಮೊಸಳೆಯ ಓಡಾಟದಿಂದ ಸ್ಥಳೀಯರು ಆತಂಕಗೊಂಡಿದ್ದು, ಅದನ್ನು ಹಿಡಿದು ಜನವಸತಿ ರಹಿತ ಪ್ರದೇಶಕ್ಕೆ ಬಿಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.