ವಿಟ್ಲ, ಜು02(Daijiworld News/SS): ಬೆಂಗಳೂರು ಕಡೆಯಿಂದ ಬರುತ್ತಿದ್ದ ಖಾಸಗಿ ಹಾಗೂ ಕೆಎಸ್'ಆರ್'ಟಿಸಿ ಬಸ್'ಗಳು ಸ್ಪಲ್ಪ ಅಂತರದಲ್ಲಿ ಒಂದೇ ಸ್ಥಳದಲ್ಲಿ ಚರಂಡಿಗೆ ಉರುಳಿದ ಘಟನೆ ವಿಟ್ಲ ಸಮೀಪದ ಮಿತ್ತೂರು ಎಂಬಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಬೆಂಗಳೂರಿನಿಂದ ನಿನ್ನೆ ರಾತ್ರಿ ಮಂಗಳೂರಿಗೆ ಹೊರಟ ಖಾಸಗಿ ಬಸ್ ಮಿತ್ತೂರು ತಿರುವಿನಲ್ಲಿ ಹಾಲಿನ ವಾಹನವನ್ನು ತಪ್ಪಿಸುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಉರುಳಿದೆ. ಈ ಘಟನೆ ನಡೆದು ಸ್ಪಲ್ಪ ಹೊತ್ತಿನಲ್ಲಿ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಇನ್ನೊಂದು ಕೆಎಸ್'ಆರ್'ಟಿಸಿ ಐರಾವತ ಬಸ್ ಅದೇ ಸ್ಥಳದಲ್ಲಿ ಬಸ್ ಬಿದ್ದಿರುವುದು ಕಂಡು ಹಠತ್ತನೇ ಬ್ರೇಕ್ ಹಾಕಿದೆ. ಪರಿಣಾಮ, ಬಸ್ ಚರಂಡಿಗೆ ಉರುಳಿ ಬಿದ್ದಿದೆ.
ಘಟನೆಯಲ್ಲಿ ಎರಡು ಬಸ್ಸಿನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಎರಡು ಬಸ್'ಗಳು ಅಕ್ಕಪಕ್ಕದಲ್ಲಿ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು. ಎರಡು ಬಸ್ಸಿನ ಮುಂಭಾಗ ಜಖಂಗೊಂಡಿದೆ ಎನ್ನಲಾಗಿದೆ.
ಘಟನೆಯಿಂದ ಟೆಲಿಫೋನ್ ಕೇಬಲ್'ಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.