ಮೂಡುಬಿದಿರೆ, ಜು02(Daijiworld News/SS): ಮೂಡಬಿದಿರೆಯಲ್ಲಿನ ಜೈನರ ಪ್ರಸಿದ್ಧ ಆರಾಧನಾ ಸ್ಥಳವಾದ ಸಾವಿರ ಕಂಬದ ಬಸದಿಯ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆಯೊಂದು ವರದಿಯಾಗಿದೆ.
ಜು.01 ರ ರಾತ್ರಿ ವೇಳೆ ಸಾವಿರ ಕಂಬದ ಬಸದಿಯ ಬೀಗ ಮುರಿದು ಕಳ್ಳರು ಒಳ ಪ್ರವೇಶಿಸಿದ್ದಾರೆ. ಮಾತ್ರವಲ್ಲ, ಬಸದಿಯಲ್ಲಿನ ಕಾಣಿಕೆ ಹುಂಡಿಯ ಬೀಗ ಒಡೆದು ಅಲ್ಲಿದ್ದ ನಗದನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಬಸದಿಯ ಗರ್ಭಗುಡಿಗೂ ಕಳ್ಳರು ಪ್ರವೇಶಿಸಲು ಯತ್ನಿಸಿದ್ದು, ಸೂಕ್ತ ತನಿಖೆಯ ಬಳಿಕ ಕಳುವಾದ ವಸ್ತುಗಳ ಮಾಹಿತಿ ಲಭ್ಯವಾಗಬೇಕಿದೆ. ಮೇಲ್ನೊಟಕ್ಕೆ ಹುಂಡಿಯಲ್ಲಿದ್ದ ಹಣ ಮಾತ್ರ ಕಳವು ಆಗಿರುವುದು ಗಮನಕ್ಕೆ ಬಂದಿದೆ.
ಘಟನೆ ಸ್ಥಳಕ್ಕೆ ಕ್ರೈಂ ವಿಭಾಗದ ಡಿಸಿಪಿ ಲಕ್ಷ್ಮೀ ಗಣೇಶ್, ಎಸಿಪಿ ಉತ್ತರ ವಿಭಾಗ ಶ್ರೀನಿವಾಸ ಗೌಡ, ಮೂಲ್ಕಿ ಇನ್ಸ್ಪೆಕ್ಟರ್ ಅನಂತ ಪದ್ಮನಾಭ, ಮೂಡುಬಿದಿರೆ ಠಾಣಾಧಿಕಾರಿ ದೇಜಪ್ಪ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸಿಸಿ ಟಿ.ವಿ ನಿಷ್ಕ್ರೀಯಗೊಂಡಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳು ಬಸದಿಗೆ ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ.
ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿಯವರು ಅಮೇರಿಕದಲ್ಲಿ ಧಾರ್ಮಿಕ ಪ್ರವಾಸದಲ್ಲಿದ್ದು, ಘಟನೆಯ ಬಗ್ಗೆ ಸೂಕ್ತ ತನಿಖೆಗಾಗಿ ಪೊಲೀಸರನ್ನು ಒತ್ತಾಯಿಸಿದ್ದಾರೆ.