ಬೆಂಗಳೂರು, ಜು 02 (Daijiworld News/MSP): ಕುಂದಾಪುರ ತಾಲೂಕಿನ ಕೆದೂರು–ಬೇಳೂರು ಸ್ಫೂರ್ತಿಧಾಮ ಅನಾಥಾಶ್ರಮದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಕೇಶವ ಕೋಟೇಶ್ವರ (50) ಅವರಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಈತ ಸ್ಫೂರ್ತಿಧಾಮ ಅನಾಥಾಶ್ರಮ ಮುಖ್ಯಸ್ಥನಾಗಿದ್ದು ತನ್ನ ಅನಾಥಾಶ್ರಮದಲ್ಲಿದ್ದ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪೋಕ್ಸೊ ಕಾಯ್ದೆಯಡಿ ಬಂಧನಕ್ಕೆ ಒಳಪಟ್ಟಿದ್ದರು. ಪೊಲೀಸರು 2019ರ ಮಾರ್ಚ್ 14ರಂದು ಬಂಧಿಸಿದ್ದರು. ಅವರು ಸದ್ಯ ಹಿರಿಯಡ್ಕ ಜೈಲಿನಲ್ಲಿದ್ದಾರೆ.
ಈ ಹಿನ್ನಲೆಯಲ್ಲಿ ಅನಾಥಾಶ್ರಮದ ಮುಖ್ಯಸ್ಥನಾಗಿದ್ದ ಆದ ಕೇಶವ ಕೊಟೇಶ್ವರ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಜು.೦೨ ರ ಸೋಮವಾರ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭ ಆರೋಪಿ ಕೇಶವ ಕೋಟೇಶ್ವರ ಅವರ ಪರ ವಕೀಲ ಡಿ.ಮೋಹನ್ ಕುಮಾರ್, ಅರ್ಜಿದಾರರ ಬಂಧನದಿಂದ ಅವರ 83 ವರ್ಷದ ತಾಯಿ ಮಾನಸಿಕ ಖಿನ್ನತೆ ಒಳಗಾಗಿದ್ದಾರೆ . ಇದೇ ಕಾರಣದಿಂದ ಸರಿಯಾಗಿ ಆಹಾರ ಸೇವಿಸುತ್ತಿಲ್ಲ. ಅರೋಗ್ಯದಲ್ಲಿ ಏರುಪೇರು ಆಗಿದೆ. ಈ ಕಾರಣದಿಂದ ಅನುಕಂಪದ ಆಧಾರದ ಮೇಲೆ ತಾಯಿಯನ್ನು ಭೇಟಿ ಮಾಡಲು ಅನುಕೂಲವಾಗುವಂತೆ ಜಾಮೀನು ನೀಡಬೇಕು ಎಂದು ಕೇಳಿಕೊಂಡರು.
ಇದಕ್ಕೆ ನ್ಯಾಯಲಯವೂ ಸ್ಪಂದಿಸಿದ್ದು, " ಪೊಲೀಸ್ ಕಾವಲಿನೊಂದಿಗೆ ತಾಯಿಯನ್ನು ಭೇಟಿ ಮಾಡಲು ಆರೋಪಿಗೆ ಅವಕಾಶ ನೀಡುವ ಬಗ್ಗೆ ವರದಿ ಸಲ್ಲಿಸಿ" ಎಂದು ರಾಜ್ಯ ಪ್ರಾಸಿಕ್ಯೂಟರ್ ಅವರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.