ಕಾಸರಗೋಡು, ನ. 02 (DaijiworldNews/AA): ದ್ವಿಚಕ್ರ ವಾಹನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಮಂಜೇಶ್ವರ ವಾಮಂಜೂರು ಬಳಿ ನಡೆದಿದೆ.

ಪೈವಳಿಕೆ ಕಳಾಯಿಯ ಗೋಪಾಲಕೃಷ್ಣ ನಲ್ಲೂರಾಯ (66) ಮೃತಪಟ್ಟವರು. ಗಾಯಗೊಂಡ ಸಹ ಸವಾರ ಶಿವಶಂಕರ ಭಟ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂಜಾ ಕಾರ್ಯಕ್ಕಾಗಿ ತೆರಳುತ್ತಿದ್ದಾಗ ಗೋಪಾಲಕೃಷ್ಣ ಅವರು ಸಂಚರಿಸುತ್ತಿದ್ದ ಸ್ಕೂಟರ್ ಇನ್ನೊಂದು ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಪರಿಣಾಮ ಗೋಪಾಲಕೃಷ್ಣ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಗೋಪಾಲಕೃಷ್ಣರು ಕೃಷಿಕರು, ಅರ್ಚಕರಾಗಿದ್ದರು. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.