ಮಂಜೇಶ್ವರ, ನ. 02 (DaijiworldNews/AA): ಉಪ್ಪಳ ರೈಲ್ವೆ ಗೇಟ್ ಸಮೀಪದ ಹಳಿಯಲ್ಲಿ ಮಂಗಳೂರು ಬಜಾಲ್ ನಿವಾಸಿ ನೌಫಲ್ ನ ಮೃತದೇಹ ಪತ್ತೆಯಾದ ಘಟನೆ ಬಗ್ಗೆ ತನಿಖೆ ಚುರುಕು ಗೊಳಿಸಿದ್ದು, ಘಟನಾ ಈ ಸ್ಥಳಕ್ಕೆ ಪೊಲೀಸ್ ಸರ್ಜನ್ ಡಾ. ರೋಹಿತ್ ನೇತೃತ್ವದ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಕೊಲೆ ಎಂಬ ಶಂಕೆ ಉಂಟಾದ ಹಿನ್ನಲೆಯಲ್ಲಿ ಸರ್ಜನ್ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಮಂಜೇಶ್ವರ ಠಾಣಾ ಇನ್ಸ್ ಪೆಕ್ಟರ್ ಪಿ.ಅಜಿತ್ ಕುಮಾರ್, ಹೊಸದುರ್ಗ ಠಾಣಾ ಇನ್ಸ್ ಪೆಕ್ಟರ್ ಅನೂಪ್ ಕುಮಾರ್, ಫಾರೆನ್ಸಿಕ್ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು.
ಶನಿವಾರ ಬೆಳಿಗ್ಗೆ ಉಪ್ಪಳ ಗೇಟ್ ಸಮೀಪದ ರೈಲ್ವೆ ಹಳಿಯಲ್ಲಿ ನೌಫಲ್ ನ ಮೃತದೇಹ ಪತ್ತೆಯಾಗಿತ್ತು. ಕುತ್ತಿಗೆ ಹಾಗೂ ದೇಹದಲ್ಲಿ ಗಾಯಗಳು ಕಂಡುಬಂದಿವೆ. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.