ಮಂಗಳೂರು, ಜು 02 (Daijiworld News/SM): ಅಕ್ರಮ ಗೋ ಸಾಗಾಟ ಹಾಗೂ ಗೋ ಕಳ್ಳತನ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಗೋ ಹತ್ಯೆ ನಿಷೇಧಿಸಬೇಕೆಂದು ಹಿಂದೂ ಸಂಘಟನೆಗಳು ಜುಲೈ 03ರ ಬುಧವಾರದಂದು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ಹಿನ್ನೆಲೆ ಶಾಂತಿ ಕಾಪಾಡಲು ಮಂಗಳೂರು ಗ್ರಾಮಾಂತರ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಬುಧವಾರ ನಡೆಯಲಿರುವ ಪ್ರತಿಭಟನೆ ಹಿನ್ನೆಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಮಂಗಳವಾರದಂದು ನಾಗರಿಕ ಸಭೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಗ್ರಾಮಾಂತರ ಠಾಣಾಧಿಕಾರಿ ಬಿ. ಸಿದ್ದಗೌಡ ಭಜಂತ್ರಿ, ಗ್ರಾಮಾಂತರ ಠಾಣಾ ವ್ಯಾಪ್ತಿಯ ಜನರು ಪ್ರತಿಭಟನೆಗೆ ಹೋಗುವ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಮಾತ್ರವಲ್ಲದೆ ಗ್ರಾಮದಲ್ಲಿ ಶಾಂತಿ ಸೌಹಾರ್ದತೆಯ ದೃಷ್ಟಿಯಿಂದ ಜನರಿಗೆ ಯಾವುದೇ ಸಮಸ್ಯೆಗಳಿದ್ದರೂ ತಕ್ಷಣ ಠಾಣೆಗೆ ಅಥವಾ ಠಾಣಾಧಿಕಾರಿಗಳಿಗೆ ಕರೆಮಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಮಂಗಳೂರು ಹಾಗೂ ಇತರ ಪರಿಸರಗಳಲ್ಲಿ ದನಗಳ್ಳರ ಹಾವಳಿ ಹೆಚ್ಚಾಗಿದೆ. ಕೆಲವು ದನಗಳ್ಳರು ಹಟ್ಟಿಯಿಂದಲೇ ದನಗಳನ್ನು ಕಳವು ಮಾಡುತ್ತಿದ್ದಾರೆ. ಇದರಿಂದ ಅಮಾಯಕ ದನ ಸಾಕಾಣೆದಾರರಿಗೆ ನಷ್ಟವುಂಟಾಗುತ್ತಿದ್ದು, ಸಮಾಜದಲ್ಲಿ ಶಾಂತಿ ಭಂಗಕ್ಕೂ ಕಾರಣವಾಗುತ್ತಿದೆ ಎಂದರು. ಈ ಹಿನ್ನೆಲೆಯಲ್ಲಿ ದನ ಸಾಕಾಣೆದಾರರು ಮುನ್ನೆಚ್ಚರಿಕೆಗಳನ್ನು ವಹಿಸಬೇಕೆಂದು ಅವರು ತಿಳಿಸಿದ್ದಾರೆ.
ಪ್ರಮುಖವಾಗಿ ಭದ್ರತೆಯಿಂದ ಕೂಡಿದ ಕೊಟ್ಟಿಗೆ ನಿರ್ಮಿಸಿ ಸೂಕ್ತ ಬಾಗಿಲನ್ನು ಅಳವಡಿಸಿ ಬೀಗ ಹಾಕಬೇಕು. ಹಟ್ಟಿಗೆ ರಾತ್ರಿ ಸಮಯದಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು. ರಸ್ತೆಗಳಿಗೆ ಹಟ್ಟಿಯ ದನಗಳು ಕಾಣದಂತೆ ವ್ಯವಸ್ಥೆ ಮಾಡಬೇಕು ಸೇರಿದಂತೆ ಹಲವು ಸೂಚನೆಗಳನ್ನು ಪೊಲೀಸರು ಸಾರ್ವಜನಿಕರಿಗೆ, ದನ ಸಾಕಾಣೆದಾರರಿಗೆ ನೀಡಿದ್ದಾರೆ.