ಕಾಸರಗೋಡು,ಜು 02(Daijiworld News/SM): ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸಾಂಕ್ರಾಮಿಕ ರೋಗ ಹರಡುತ್ತಿದೆ. ಡೆಂಗ್ಯು, ಎಚ್1 ಎನ್1, ಮಲೇರಿಯಾ ಹಾಗೂ ಇತರ ಸಾಂಕ್ರಾಮಿಕ ರೋಗಗಳು ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ. ಸಾಂಕ್ರಾಮಿಕ ರೋಗಕ್ಕೆ ಐದು ವರ್ಷದ ಬಾಲಕಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.
ಉಪ್ಪಳ ಜೋಡುಕಲ್ಲು ಓಪತ್ತಿಮೂಲೆಯ ರಮೇಶ್ ಶೆಟ್ಟಿ(44) ಹಾಗೂ ಪಾಲಕುನ್ನು ಭಗವತಿ ಕ್ಷೇತ್ರದ ಸಮೀಪದ ಕುಂಞಿ ಕಣ್ಣನ್ ರವರ ಪುತ್ರಿ ೫ ವರ್ಷದ ಬಾಲಕಿ ಮೃತಪಟ್ಟವರು.
ಪೈಂಟಿಂಗ್ ಕಾರ್ಮಿಕನಾಗಿದ್ದ ರಮೇಶ್ ಶೆಟ್ಟಿ ಒಂದು ವರ್ಷದ ಹಿಂದೆ ಮುಂಬೈಯ ಹೋಟೆಲ್ ನಲ್ಲಿ ಕಾರ್ಮಿಕನಾಗಿ ದುಡಿದಿದ್ದರು. ಬಳಿಕ ಊರಿಗೆ ಬಂದು ಪೈಂಟಿಂಗ್ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕಲ್ಲಿಕೋಟೆಯಲ್ಲಿ ಕಟ್ಟಡವೊಂದರ ಪೈಂಟಿಂಗ್ ಕೆಲಸಕ್ಕೆ ತೆರಳಿದ್ದರು. ಜ್ವರದ ಹಿನ್ನಲೆಯಲ್ಲಿ ಊರಿಗೆ ಬಂದಿದ್ದ ರಮೇಶ್ ರವರು ಶುಕ್ರವಾರ ಉಪ್ಪಳದ ಖಾಸಗಿ ಆಸ್ಪತ್ರೆಯಿಂದ ಔಷದಿ ತೆಗೆದುಕೊಂಡರೂ ವಾಸಿಯಾಗದ ಕಾರಣ ಶನಿವಾರ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸೋಮವಾರ ಮೃತಪಟ್ಟಿದ್ದಾರೆ. ಇವರಿಗೆ ನ್ಯೂಮೋ ನಿಯಾ ತಗಲಿತ್ತೆಂದು ಶಂಕಿಸಲಾಗಿದೆ.
ಈ ನಡುವೆ ಜ್ವರದಿಂದ ಬಳಲುತ್ತಿದ್ದ ಮಗು ಕೂಡ ಸೋಮವಾರ ಮೃತಪಟ್ಟಿದೆ. ಉದುಮ ಹಾಗೂ ಕಾಸರಗೋಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ, ಫಲಕಾರಿಯಾಗದೆ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.