ಮಂಗಳೂರು, ಜು 03 (Daijiworld News/MSP): ದೇರಳಕಟ್ಟೆ ಬಗಂಬಿಲ ಬಳಿ ಜೂನ್ 28 ರಂದು ಯುವತಿ ದೀಕ್ಷಾಗೆ ಮಾರಣಾಂತಿಕವಾಗಿ ಚೂರಿ ಇರಿದು ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಪಾಗಲ್ ಪ್ರೇಮಿ ರೌಡಿ ಶೀಟರ್ ಆರೋಪಿ ಸುಶಾಂತ್ ನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಸುಶಾಂತ್ ಗುಣಮುಖನಾಗಿರುವ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ನೇರವಾಗಿ ತಮ್ಮ ವಶಕ್ಕೆ ಪಡೆದಿರುವ ಪೊಲೀಸರು ಬುಧವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಪ್ರೀತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಆರೋಪಿ ಸುಶಾಂತ್ ಕಾರ್ಕಳದ ಕಾಲೇಜು ವಿದ್ಯಾರ್ಥಿಯಾಗಿದ್ದ ದೀಕ್ಷಾಳಿಗೆ 12 ಬಾರಿ ಚೂರಿ ಇರಿದು ಗಂಭೀರವಾಗಿ ಗಾಯಗೊಳಿಸಿದ್ದ. ಆ ಬಳಿಕ ತಾನು ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಬಳಿಯಲ್ಲೇ ಘಟನೆ ನಡೆದಿದ್ದರಿಂದ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಸ್ಥಳೀಯರು ದೀಕ್ಷಾ ಹಾಗೂ ಆರೋಪಿ ಸುಶಾಂತ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ದೀಕ್ಷಾಗೆ ಆಸ್ಪತ್ರೆಯ ವೈದ್ಯರು ನಿರಂತರ ಶಸ್ತ್ರಚಿಕಿತ್ಸೆ ನಡೆಸಿದ್ದರಿಂದ ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆಕೆಯ ಕಿಡ್ನಿಗೆ ಹಾನಿಯಾಗಿರುವುದರಿಂದ ರಕ್ತಹೆಪ್ಪುಗಟ್ಟಿದ್ದು ಪ್ರಥಮ ಹಂತದ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಅದೇ ಆಸ್ಪತ್ರೆಯಲ್ಲಿ ಪೊಲೀಸ್ ಸುಪರ್ದಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುಶಾಂತ್ ಸಂಪೂರ್ಣ ಗುಣಮುಖನಾಗಿದ್ದು ಗಾಯಗಳಿಗೆ ಹಾಕಲಾಗಿದ್ದ ಬ್ಯಾಂಡೇಜ್ ನ್ನು ತೆಗೆಯಲಾಗಿದೆ. ಈ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.