ಪುತ್ತೂರು, ಜು 03 (Daijiworld News/MSP): ಸಹಪಾಠಿ ವಿದ್ಯಾರ್ಥಿನಿಗೆ ಮಾದಕ ವಸ್ತು ತಿನ್ನಿಸಿ ಆಕೆ ಪ್ರಜ್ಞಾಹೀನಾ ಸ್ಥಿತಿ ತಲುಪಿದ ಬಳಿಕ ಆಕೆಯ ಸಹಪಾಠಿ ವಿದ್ಯಾರ್ಥಿಗಳೇ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ದಕ್ಷಿಣ ಕನ್ನಡದ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಿದ್ದರು.
ಘಟನೆ ರಾಜ್ಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ, ಪ್ರಕರಣ ಗಂಭೀರತೆಯನ್ನು ಪಡೆದ ಹಿನ್ನಲೆಯಲ್ಲಿ ಪುತ್ತೂರಿಗೆ ಭೇಟಿ ನೀಡಿದ ದಕ್ಷಿಣ ಕನ್ನಡ ಎಸ್ಪಿ ಬಿ.ಎಂ. ಲಕ್ಷ್ಮಿ ಪ್ರಸಾದ್ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿದ್ದು, ಇನ್ನಿಬ್ಬರು ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಉಪ್ಪಿನಂಗಡಿ ಮೂಲದ ಒಟ್ಟು 4 ಜನ, ಪುತ್ತೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ಸಹಪಾಠಿ ವಿದ್ಯಾರ್ಥಿನಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿನಿಗೆ ಅಮಲು ಪದಾರ್ಥ ತಿನ್ನಿಸಿ ಕಾರಿನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಲ್ಲದೆ ಈ ಘಟನೆಗಳನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದರು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತು.