ಕುಂದಾಪುರ, ಜು 03 (Daijiworld News/MSP): ಬೈಂದೂರು ತಾಲೂಕು ನಾವುಂದ ಕುದ್ರುಕೋಡುವಿನಲ್ಲಿರುವ ಆಶ್ರದ್ ಪೌಲ್ಟ್ರಿ ಫಾರ್ಮ್ನ ಅವೈಜ್ಞಾನಿಕ ನಿರ್ವಹಣೆಯಿಂದ ಕೊಳೆತ ಕೋಳಿ ಗೊಬ್ಬರ ದ್ರವ್ಯರೂಪಗೊಂಡು ಮಳೆ ನೀರಿನೊಂದಿಗೆ ಎಲ್ಲೆಂದರಲ್ಲಿ ಹರಿಯುತ್ತಿದ್ದು, ಪಕ್ಕದಲ್ಲಿರುವ ಬೃಹತ್ ಸಾರ್ವಜನಿಕ ಮದಗ ಕೋಳಿ ತ್ಯಾಜ್ಯದಿಂದ ತುಂಬಿಕೊಂಡು ದುರ್ನಾತಮವಾದ ಪರಿಸರದಲ್ಲಿ ಉಸಿರಾಡದ ಸ್ಥಿತಿ ನಿರ್ಮಾಣವಾಗಿದೆ. ಪರಿಸರದ ಸುಮಾರು 25ಕ್ಕೂ ಹೆಚ್ಚು ಕುಡಿಯುವ ನೀರಿನ ಬಾವಿಗಳ ನೀರು ಕಲುಷಿತಗೊಂಡು ಕುಡಿಯಲಾಗದ ಸ್ಥಿತಿ ನಿರ್ಮಾಣವಾಗಿದೆ.
ಭಟ್ಕಳ ಮೂಲದ ಇಬ್ರಾಹಿಂ ಎನ್ನುವವರ ಕೋಳಿ ಫಾರ್ಮ್ ಇದಾಗಿದ್ದು, ಸುಮಾರು ಆರು ಎಕರೆ ಸ್ಥಳದಲ್ಲಿದೆ. ಸುಮಾರು 39 ಸಾವಿರ ಮೊಟ್ಟೆ ಕೋಳಿಗಳು ಇರುವ ಬೃಹತ್ ಕೋಳಿ ಪಾರ್ಮ್ ಇದಾಗಿದ್ದು, ಬೇಜಬ್ದಾರಿಯ ನಿರ್ವಹಣೆಯಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಸುಮಾರು ನಾಲ್ಕಾರು ಬೃಹತ್ ಯೂನಿಟ್ಗಳ ಕೋಳಿ ಗೊಬ್ಬರವನ್ನು ತಗೆಯದ ಕಾರಣ ಅದು ತುಂಬಿ ಹೊರಗಡೆ ಹರಿಯುತ್ತಿದೆ. ಸಮೀಪದಲ್ಲಿರುವ ನಾರಾಯಣ ಪೂಜಾರಿ ಎನ್ನುವವರ ಮನೆಯ ಹಿಂಭಾಗದ ತೋಡಿನ ಮೂಲಕ ಕೋಳಿಹಿಕ್ಕೆ ಸೇರಿದ ತ್ಯಾಜ್ಯ ಮದಗ ಸೇರುತ್ತಿದೆ. ಸುತ್ತ ಒಂದು ಕಿ.ಮೀ ವ್ಯಾಪ್ತಿಯಲ್ಲಿ ದುರ್ನಾತಮಯ ವಾತಾವರಣ ನಿರ್ಮಾಣವಾಗಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಪರಿಸರದವರು ಸಂಬಂಧಪಟ್ಟವರಿಗೆ ದೂರು ನೀಡಿದ್ದಾರೆ. ಆರೋಗ್ಯ ಇಲಾಖೆಯವರು ಪರಿಸರದ ಬಾವಿಯ ನೀರನ್ನು ಪರೀಕ್ಷೆಗೊಳಪಡಿಸಿದ್ದು ಕುದಿಸದೇ ಕುಡಿಯಬಾರದು ಎಂದಿದ್ದಾರೆ.ಈ ಬಗ್ಗೆ ಜಿ.ಪಂ.ಸದಸ್ಯೆ ಗೌರಿ ದೇವಾಡಿಗ ಅವರು ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದು, ಈ ಕೋಳಿಪಾರಂ ಮುಚ್ಚುವಂತೆ ಆಗ್ರಹಿಸಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯತಿ ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಗಳಿಂದ ವರದಿ ಪಡೆದು ಫಾರ್ಮ್ಗೆ ನೋಟಿಸು ನೀಡಿದೆ. ಆದರೂ ಕೂಡಾ ಪೌಲ್ಟ್ರಿ ಫಾರ್ಮ್ ಮಾಲಕರು ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ.
ಸ್ಥಳಕ್ಕೆ ಶಾಸಕರ ಭೇಟಿ
ಸ್ಥಳಕ್ಕೆ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಭೇಟಿ ನೀಡಿದ್ದು ಪರಿಸ್ಥಿತಿ ಅವಲೋಕಿಸಿ, ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಮಾಲಿನ್ಯ ನಿಯಂತ್ರಣಾಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ. ಆ ಸಂದರ್ಭ ನೆರೆದ ಗ್ರಾಮಸ್ಥರು ಪರಿಸರ ಮಾಲಿನ್ಯ ಕಾರಣವಾದ ಬೇಜಾಬ್ದಾರಿಯುತ ಆರ್ಶದ್ ಪೌಲ್ಟ್ರಿ ಫಾರ್ಮ್ ಮುಚ್ಚುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯೆ ಗೌರಿ ದೇವಾಡಿಗ, ಗ್ರಾ.ಪಂ. ಅಧ್ಯಕ್ಷ ಎನ್.ನರಸಿಂಹ ದೇವಾಡಿಗ, ತಾ.ಪಂ.ಸದಸ್ಯ ಪುಷ್ಪರಾಜ ಶೆಟ್ಟಿ, ಗ್ರಾ.ಪಂ.ಸದಸ್ಯೆ ಜಯಂತಿ, ಬಿಜೆಪಿ ಮುಖಂಡ ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.