ಮಂಗಳೂರು, ಜು03(Daijiworld News/SS): ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಟ ವೇತನ ಸೌಲಭ್ಯವನ್ನು ನಿಗದಿಗೊಳಿಸಿ, ಸೇವಾ ಭದ್ರತೆಯನ್ನು ನೀಡಿ, ಖಾಯಂ ಮಾಡಲು ರಾಜ್ಯ ಸರಕಾರ ಮುಂದಾಗಬೇಕು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ.
ಕಳೆದ 30 ವರ್ಷಗಳಿಂದ ಮಂಡಲ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಾ ಇರುವ ಸಿಬ್ಬಂದಿಗಳಿಗೆ ಮಾಸಿಕ ರೂ 300, ರೂ 500, ರೂ 750, ರೂ 1000, ರೂ 1500, ರೂ 2500, ರೂ 5500 ಮತ್ತು ಇತ್ತೀಚೆಗೆ ರೂ 7000 ಗೌರವಧನವಾಗಿ ಸಿಗುತ್ತಿದೆ. ಈ ಸಿಬ್ಬಂದಿಗಳು ಕಳೆದ ಅನೇಕ ವರ್ಷಗಳಿಂದ ಕನಿಷ್ಟ ವೇತನ ಮತ್ತು ಸೇವಾ ಭದ್ರತೆಯೊಂದಿಗೆ ಖಾಯಂ ಮಾಡಲು ಹೋರಾಟ ಮಾಡುತ್ತಾ ಬಂದಿದ್ದಾರೆ. 2016 ನೇ ಅಗಸ್ಟ್ 5 ರಂದು ರಾಜ್ಯ ಸರಕಾರ 13 ಸಾವಿರ ಕನಿಷ್ಟ ವೇತನ ನೀಡುವ ಬಗ್ಗೆ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟನೆ ನೀಡಿದರೂ ಸಂಬಂಧಪಟ್ಟ ಇಲಾಖೆಯವರು ಕರ್ತವ್ಯದ ಸೇವಾವಧಿಯನ್ನು ಬರೀ ನಾಲ್ಕು ಗಂಟೆ ಅಂದರೆ ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಮತ್ತು ಸಾಯಂಕಾಲ 4 ಗಂಟೆಯಿಂದ 6 ಗಂಟೆಯವರೆಗೆ ಮಾಡಿ ಕನಿಷ್ಟ ವೇತನ ಸೌಲಭ್ಯದಿಂದ ವಂಚಿತಗೊಂಡಿದ್ದಾರೆ ಎಂದು ದೂರಿದ್ದಾರೆ.
ಅವರ ಸೇವಾವಧಿಯನ್ನು ಕಡಿತ ಮಾಡಿರುವುದರಿಂದ ಬೆಳಿಗ್ಗೆ 11 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಅವರು ಎಲ್ಲಿ ಕರ್ತವ್ಯ ಮಾಡುವುದು ಎನ್ನುವ ಪ್ರಶ್ನೆ ಮೂಡಿದೆ. ಆದರೆ ಹೆಚ್ಚಿನ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು ಗ್ರಾಮ ಪಂಚಾಯತ್ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವುದರಿಂದ ಹಿಂದಿನ ಅವಧಿಯಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಗ್ರಂಥಾ ಮೇಲ್ವಿಚಾರಕರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮೇಲ್ವಿಚಾರಕರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮೇಲ್ವಿಚಾರಕರು, ಅಂಗವಿಕಲರು ಹಾಗೂ ವಿಧವೆ ಮೇಲ್ವಿಚಾರಕರು ಇದ್ದಾರೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಕಡಿಮೆ ವೇತನ ಬರುತ್ತಿರುವುದರಿಂದ ಈ ಸಿಬ್ಬಂದಿಗಳ ಮತ್ತು ಅವರ ಕುಟುಂಬದ ಜೀವನ ನಿರ್ವಹಣೆ ಮಾಡಲು ಅಸಾಧ್ಯವಾಗಿರುತ್ತದೆ. ಕನಿಷ್ಟ ವೇತನ ನೀಡದಿರುವ ಬಗ್ಗೆ ಒಂದಿಬ್ಬರು ಮೇಲ್ವಿಚಾರಕರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿನಾಂಕ 24.06.2019 ರಂದು ಚಿಕ್ಕಬಳ್ಳಾಪುರದ ಗ್ರಂಥಾಲಯ ಮೇಲ್ವಿಚಾರಕರಾದ ರೇವಣ್ಣ ಕುಮಾರ್ ಎಂಬುವವರು ಸರಕಾರ ಕನಿಷ್ಟ ವೇತನ ನೀಡದಿರುವ ಬಗ್ಗೆ ಜೀವನದಲ್ಲಿ ನೊಂದು ಮರಣಪತ್ರದಲ್ಲಿ ಬರೆದು ಆತ್ಮಹತ್ಯೆ ಮಾಡಲು ಹೊರಟ್ಟಿದ್ದ ಘಟನೆ ವಿಧಾನಸೌಧದ ಒಳಗೆ ನಡೆದಿದೆ ಎಂದು ಹೇಳಿದರು.
ಮಾನ್ಯ ಮುಖ್ಯಮಂತ್ರಿಯವರು 2016 ನೇ ಅಗಸ್ಟ್ 5ನೇ ದಿನಾಂಕದಂದು ಕರ್ನಾಟಕ ಸರಕಾರ ರಾಜ್ಯಪತ್ರದಲ್ಲಿ ಪ್ರಕಟಿಸಿದ ಕನಿಷ್ಟ ವೇತನವನ್ನು ಜಾರಿ ಮಾಡಿ ಸೇವಾ ಭದ್ರತೆಯನ್ನು ನೀಡಿ ಉದ್ಯೋಗ ಖಾಯಂ ಮಾಡಿ, ಇನ್ನೂ ಹೆಚ್ಚಿನ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು ಆತ್ಮಹತ್ಯೆ ಯತ್ನ ಮಾಡದಂತೆ ತಡೆಯಬೇಕಾಗಿ ಶಾಸಕ ಕಾಮತ್ ವಿನಂತಿಸಿದ್ದಾರೆ.