ಪುತ್ತೂರು, ಜು 03 (Daijiworld News/MSP):ವಿದ್ಯಾರ್ಥಿನಿಯನ್ನು ಆಕೆಯ ಐವರು ಸಹಪಾಠಿ ವಿದ್ಯಾರ್ಥಿಗಳೇ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಪುತ್ತೂರಿನ ಬಜತ್ತೂರು ಗುರುನಂದನ್ (19), ಬಂಟ್ವಾಳದ ಪೆರ್ನೆ ಗ್ರಾಮ ಪ್ರಜ್ವಲ್ (19), ಬಂಟ್ವಾಳದ ಪೆರ್ನೆ ಗ್ರಾಮದ ಕಡಂಬು ಮನೆಯ ಕಿಶನ್ (19), ಪುತ್ತೂರಿನ ಆರ್ಯಾಪು ಗ್ರಾಮದ ಪಿಲಿಗುಂಡ ಮನೆಯ ಸುನಿಲ್ (19) , ಬಂಟ್ವಾಳದ ಬರಿಮಾರು ಬಲ್ಯ ಮನೆ ಪ್ರಖ್ಯಾತ್ (19) ಇವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
"ಮಾರ್ಚ್ ತಿಂಗಳ ಕೊನೆಯ ವಾರ ಮದ್ಯಾಹ್ನ 3.00 ಗಂಟೆಗೆ ಸಂತ್ರಸ್ತೆ ಬಳಿ ತೆರಳಿದ್ದ ಕಾಲೇಜಿನ ಸಹಪಾಠಿ ಸುನಿಲ್ ಎಂಬಾತನು ಸಂತ್ರಸ್ತೆ ಬಳಿ ಮಾತನಾಡಲಿಕ್ಕಿದೆ ಎಂದು ಕಾರಿನಲ್ಲಿ ಕುಳ್ಳಿರಿಸಿ, ಪ್ರಜ್ವಲ್, ಪ್ರಖ್ಯಾತ್ ಎಂಬವರನ್ನು ಕೂಡಿಕೊಂಡು ಕಾರಿನಲ್ಲಿ ಚಾಲಕನೊಂದಿಗೆ ಜೊತೆಯಾಗಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಸದರಿ 4 ರಿಂದ 5 ಜನ ಆರೋಪಿಗಳು ಸಾಮೂಹಿಕವಾಗಿ ಅತ್ಯಾಚಾರ ನಡೆಸಿರುತ್ತಾರೆ. ಹಾಗೂ ಈ ವಿಚಾರವನ್ನು ಮುಂದಕ್ಕೆ ಯಾರಲ್ಲಿಯೂ ಹೇಳದಂತೆ ಜೀವ ಬೆದರಿಕೆ ಒಡ್ಡಿರುತ್ತಾರೆ ಮತ್ತು ಈ ಬಗ್ಗೆ ಬೇರೆಯವರಿಗೆ ತಿಳಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಪಡಿಸುವುದಾಗಿ ಬೆದರಿಸಿರುತ್ತಾರೆ " ಎಂದು ಸಂತ್ರಸ್ತೆ ಪುತ್ತೂರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇದಕ್ಕೂ ಮೊದಲು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ದಕ್ಷಿಣ ಕನ್ನಡದ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶ ನೀಡಿದ್ದರು.