ಕುಂದಾಪುರ, ಜು 03:(Daijiworld News/SM): ಬಟ್ಟೆ ಒಗೆಯಲೆಂದು ಹೊಳೆಗೆ ತೆರಳಿದ್ದ ಯುವತಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಇಲ್ಲಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಿಂಜೆ ಗ್ರಾಮದ ಶಾಡಿಗುಂಡಿ ಎಂಬಲ್ಲಿ ನಡೆದಿದೆ.
ಶಾಡಿಗುಂಡಿ ನಿವಾಸಿ ಲಕ್ಷ್ಮಣ ನಾಯ್ಕ ಎಂಬುವರ ಮಗಳು ಅಮಿತಾ ನಾಯ್ಕ್ ಎಂಬಾಕೆ ನಾಪತ್ತೆಯಾಗಿರುವ ಯುವತಿಯಾಗಿದ್ದಾಳೆ. ಅಮಿತಾ ನಾಯ್ಕ್ ಬೆಳಿಗ್ಗೆ ಬಟ್ಟೆ ಒಗೆಯಲೆಂದುಹೊಳೆಗೆ ಹೋಗಿದ್ದಳು ಎನ್ನಲಾಗಿದೆ. ಆದರೆ ಹಲವು ತಾಸುಗಳು ಕಳೆದರೂ ಆಕೆ ಮರಳಿ ಮನೆಗೆ ಬಂದಿರಲಿಲ್ಲ.
ಈ ಹಿನ್ನೆಲೆ ಅನುಮಾನಗೊಂಡ ಮನೆಮಂದಿ ಹೊಳೆ ಸಮೀಪ ಹೋದಾಗ ಒಗೆಯಲು ತಂದ ಬಟ್ಟೆಗಳು ಹಾಗೂ ಆಕೆಯ ಚಪ್ಪಲಿ ಹೊಳೆಯ ಬದಿಯಲ್ಲಿ ಪತ್ತೆಯಾಗಿದೆ. ಆದರೆ ಯುವತಿ ಮಾತ್ರ ನಾಪತ್ತೆಯಾಗಿದ್ದಳು. ಬಟ್ಟೆ ಒಗೆಯಲೆಂದು ಹೊಳೆಗೆ ಇಳಿದ ಸಂದರ್ಭ ಹೊಳೆಯಲ್ಲಿ ಕೊಚ್ಚಿ ಹೋಗಿರಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳೀಯರ ಸಹಕಾರದಿಂದ ಹುಡುಕಾಟ ನಡೆಸಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.