ಉಳ್ಳಾಲ, ಜು 03:(Daijiworld News/SM): ಮನೆಯೊಳಗಡೆ ಮಧ್ಯವಯಸ್ಕ ವ್ಯಕ್ತಿಯೋರ್ವರನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ತೊಕ್ಕೊಟ್ಟು ಚೆಂಬುಗುಡ್ಡೆ ಸಮೀಪ ಬುಧವಾರ ತಡರಾತ್ರಿ ವೇಳೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಹತ್ಯೆಗೀಡಾದವರ ಮೈದುನನನ್ನು ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿ ರಾಜೇಶ್
ಚೆಂಬುಗುಡ್ಡೆ ನಿವಾಸಿ ನಾರಾಯಣ(46) ಹತ್ಯೆಯಾದವರು. ನಾರಾಯಣರನ್ನು ಅವರ ಮನೆಯೊಳಗಡೆ ಬರ್ಬರವಾಗಿ ಕಡಿದು ಹತ್ಯೆ ನಡೆಸಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪತ್ನಿಯ ಸಹೋದರಿಯ ಪುತ್ರ ರಾಜೇಶ್ ಎಂಬಾತ ಕೃತ್ಯ ಎಸಗಿರುವ ಬಗ್ಗೆ ಸಂಶಯ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಉಳ್ಳಾಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಡಿತದ ಅಮಲಿನಲ್ಲಿದ್ದ ರಾಜೇಶ್ ವಾಗ್ವಾದ ನಡೆಸಿ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಘಟನೆ ವೇಳೆ ನಾರಾಯಣ ಅವರ ಪತ್ನಿ ಮನೆಯಲ್ಲಿದ್ದರು. ಆದರೆ, ಘಟನೆ ಬಳಿಕ ಅವರು ಅಸ್ವಸ್ಥರಾಗಿದ್ದಾರೆ. ಈ ಹಿನ್ನೆಲೆ ಪೊಲೀಸರಿಗೆ ಅವರಿಂದ ಹೇಳಿಕೆ ಪಡೆಯಲು ಸಾಧ್ಯವಾಗಿಲ್ಲ. ಆರೋಪಿತ ರಾಜೇಶ್ ಗುಜರಾತ್ ಪೋರ್ ಬಂದರಿನಲ್ಲಿ ಮೀನಿನ ಕೆಲಸ ಮಾಡುತ್ತಿದ್ದಾನೆ. ಮೃತ ನಾರಾಯಣ ಅವರು ಕೂಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.