ಕಾರ್ಕಳ, ನ. 20 (DaijiworldNews/AA): ಬಸ್ ಚಾಲಕನಿಗೆ ಆಕಸ್ಮಿಕವಾಗಿ ಲೋ ಬಿಪಿ ಉಂಟಾದ ಕಾರಣ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ಉಚ್ಛಂಗಿ ಮಾರಿಯಮ್ಮ ದೇವಸ್ಥಾನದ ಬಳಿ ನವೆಂಬರ್ 20ರಂದು ನಡೆದಿದೆ.

ಸಂಜೆ ಸುಮಾರು 3 ಗಂಟೆಗೆ ಈ ಘಟನೆ ಸಂಭವಿಸಿದೆ. ರಿಕ್ಷಾ ಚಾಲಕ ತಮ್ಮ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಒಳಗಡೆ ಕುಳಿತಿದ್ದಾಗ, ಬಸ್ ದಿಢೀರನೆ ಬಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ.
ಈ ಅಪಘಾತದಲ್ಲಿ ರಿಕ್ಷಾ ಚಾಲಕರಿಗೆ ತಲೆ, ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಜೊತೆಗೆ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ಬಸ್ ಚಾಲಕ ಮತ್ತು ರಿಕ್ಷಾ ಚಾಲಕ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ನಡೆದ ಸಮಯದಲ್ಲಿ ರಸ್ತೆಯಲ್ಲಿ ಹೆಚ್ಚು ಜನಸಂದಣಿ ಇಲ್ಲದ ಕಾರಣ ದೊಡ್ಡ ದುರಂತ ತಪ್ಪಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಅಪಘಾತದಲ್ಲಿ ಎರಡೂ ವಾಹನಗಳ ಮುಂಭಾಗ ಜಖಂಗೊಂಡಿದೆ.