ಉಡುಪಿ, ನ. 21 (DaijiworldNews/AA): ಮೀನುಗಾರಿಕಾ ಬೋಟ್ ಸಮುದ್ರ ಮಧ್ಯದಲ್ಲಿ ಮುಳುಗಡೆಯಾಗಿದ್ದು, ಅದರಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ ಮೀನು, ಮೀನಿನ ಬಲೆಗಳು ಸೇರಿದಂತೆ ಇತರ ಸಲಕರಣೆಗಳು ಸಮುದ್ರಪಾಲಾಗಿ ಲಕ್ಷಾಂತರ ರೂ. ನಷ್ಟವಾಗಿದೆ.

ಸಾಸ್ತಾನಾ ಕೋಡಿಕನ್ಯಾನದ ರವೀಂದ್ರ ಎನ್. ಪೂಜಾರಿ ಅವರಿಗೆ ಸೇರಿದ 'ವೀರಕಲ್ಕುಡ' ಎಂಬ ಹೆಸರಿನ ಬೋಟು, ನವೆಂಬರ್ 17ರ ಸಂಜೆ ತಂಡೇಲ್ (ಮುಖಂಡ) ಮತ್ತು ನಾಲ್ವರು ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಹೊರಟಿತ್ತು. ಅವರು ಪಣಂಬೂರು ಎನ್ಎಂಪಿಎ ಬಂದರು ಮತ್ತು ತಣ್ಣೀರುಬಾವಿ ಮಾರ್ಗದ ಮೂಲಕ ಮೀನುಗಾರಿಕೆ ನಡೆಸುತ್ತ, ನವೆಂಬರ್ 18ರಂದು ಸಮುದ್ರದಲ್ಲಿಯೇ ಇದ್ದು, ನಂತರ ಮಂಗಳೂರಿನಿಂದ ಪಶ್ಚಿಮಕ್ಕೆ ಸುಮಾರು 17 ನಾಟಿಕಲ್ ಮೈಲಿ ದೂರದಲ್ಲಿ ಈ ಬೋಟ್ ಮೀನುಗಾರಿಕೆ ನಡೆಸುತ್ತಿತ್ತು ಎನ್ನಲಾಗಿದೆ.
ನವೆಂಬರ್ 19 ರಂದು ಮೀನುಗಾರಿಕೆ ನಡೆಸುತ್ತಿದ್ದಾಗ, ಸಮುದ್ರ ಅಲೆಗಳ ಹೊಡೆತಕ್ಕೆ ಬೋಟಿನ ಕೆಳಭಾಗದ ಫೈಬರ್ ರಚನೆಗೆ ಹಾನಿಯಾಗಿದ್ದು, ನೀರು ರಭಸವಾಗಿ ಒಳನುಗ್ಗಿದೆ ಎನ್ನಲಾಗಿದೆ. ಬೋಟ್ ಮುಳುಗಲು ಪ್ರಾರಂಭಿಸುತ್ತಿದ್ದಂತೆಯೇ, ಸಮೀಪದಲ್ಲಿದ್ದ 'ವೀರ ಮಾರುತಿ' ಎಂಬ ಇನ್ನೊಂದು ಮೀನುಗಾರಿಕಾ ಬೋಟಿನ ಮೀನುಗಾರರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಐವರನ್ನೂ ರಕ್ಷಿಸಿ ಸುರಕ್ಷಿತವಾಗಿ ದಡಕ್ಕೆ ತಂದರು.
ಈ ಘಟನೆಯಲ್ಲಿ ಬೋಟ್ ಸಂಪೂರ್ಣವಾಗಿ ಮುಳುಗಿದ್ದು, ಇದರೊಂದಿಗೆ 10 ಮೀನುಗಾರಿಕಾ ಬಲೆಗಳು, ಡೀಸೆಲ್, ಐಸ್ ಬ್ಲಾಕ್ಗಳು, ಸುಮಾರು 60,000 ರೂ. ಮೌಲ್ಯದ ಮೀನುಗಳು, ಜಿಪಿಎಸ್ ಮತ್ತು ಇತರೆ ಎಲೆಕ್ಟ್ರಾನಿಕ್ ಉಪಕರಣಗಳು, ಹಾಗೂ ಐದು ಮೊಬೈಲ್ ಫೋನ್ಗಳು ಸಮುದ್ರ ಪಾಲಾಗಿವೆ. ಒಟ್ಟಾರೆ ಸುಮಾರು 35 ಲಕ್ಷ ರೂ. ಎಂದು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.