ಉಡುಪಿ, ಜು 04 (Daijiworld News/SM): ಉಡುಪಿ ಜಿಲ್ಲೆಯಲ್ಲಿ ಮರಳು ವಿತರಣೆ ಕುರಿತಂತೆ ಸ್ಯಾಂಡ್ ಬಜಾರ್ ಆಪ್ನ ಅಭಿವೃದ್ದಿ ಕಾರ್ಯ ನಡೆಯುತ್ತಿದ್ದು, ಆಪ್ ಅಭಿವೃದ್ಧಿ ಪ್ರಕ್ರಿಯೆ ಸಂಪೂರ್ಣಗೊಂಡ ನಂತರ ಆಪ್ ಮೂಲಕ ಸಾರ್ವಜನಿಕರು ನೇರವಾಗಿ ಮರಳು ಪಡೆಯಬಹುದು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಜಿಲ್ಲಾ ಮರಳು ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯ ಜನರಿಗೆ ಕಡಿಮೆ ದರದಲ್ಲಿ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ, ಮನೆ ಬಾಗಿಲಿಗೆ ಮರಳು ತಲುಪಿಸುವ ಕುರಿತಂತೆ ಜಿಲ್ಲಾಡಳಿತದ ವತಿಯಿಂದ ಸ್ಯಾಂಡ್ ಬಜಾರ್ ಆಪ್ನ ಅಭಿವೃದ್ದಿ ಮಾಡಲಾಗುತ್ತಿದೆ.
ದ.ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಆರಂಭವಾಗಿರುವ ಆಪ್ ಮಾದರಿಯಲ್ಲಿಯೇ ಉಡುಪಿ ಜಿಲ್ಲೆಗೆ ಸಂಬಂದಿಸಿದಂತೆ ಆಪ್ನ ಅಭಿವೃದ್ದಿ ನಡೆಯುತ್ತಿದ್ದು, ಈ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ, ಆಪ್ನಲ್ಲಿ ಅಳವಡಿಸಬಹುದಾದ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಇದನ್ನು ಆಪ್ ಅಭಿವೃದ್ದಿಪಡಿಸುವ ಸಂಸ್ಥೆಗೆ ನೀಡಲಾಗಿದೆ. ಸಂಪೂರ್ಣವಾಗಿ ಆಪ್ ಅಭಿವೃದ್ದಿಗೊಂಡ ನಂತರ ಸಾರ್ವಜನಿಕರಿಗೆ ಮರಳು ವಿತರಣೆ ಕುರಿತಂತೆ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದ ರೀತಿಯಲ್ಲಿ ಇದರ ಮೂಲಕವೇ ಮರಳು ವಿತರಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಸಂಸ್ಥೆಗೆ ಸೂಚಿಸಿದ್ದಾರೆ.
ಸ್ಯಾಂಡ್ ಬಜಾರ್ ಆಪ್ ಬಳಸುವ ಮೂಲಕ ಸಾರ್ವಜನಿಕರು, ತಮಗೆ ಸಮೀಪದ ಸ್ಥಳದಿಂದಲೇ ಮರಳು ಪಡೆಯಬಹುದಾಗಿದೆ. ಆನ್ಲೈನ್ನಲ್ಲಿ ಮರಳಿಗೆ ಸಂಬಂದಪಟ್ಟ ದರ ವೀಕ್ಷಿಸಿ, ಆನ್ಲೈನ್ ಪಾವತಿ ಮಾಡಿದಲ್ಲಿ, ಮನೆ ಬಾಗಿಲಿಗೆ ಮರಳು ತಲುಪಲಿದೆ. ಪ್ರತ್ಯೇಕ ವಾಹನ ಬಾಡಿಗೆ ಪಾವತಿಸುವ ಅಗತ್ಯವಿಲ್ಲ ಅಲ್ಲದೇ ತಾವು ಮರಳು ಬುಕ್ ಮಾಡಿದ ನಂತರ ಮರಳು ಲೋಡ್ ಆದ ಬಗ್ಗೆ, ಯಾವ ವಾಹನದಲ್ಲಿ ಬರುತ್ತಿದೆ ಎನ್ನುವ ಬಗ್ಗೆ ಪ್ರತಿಯೊಂದು ಮಾಹಿತಿಯು ನಿಮ್ಮ ಮೊಬೈಲಿಗೆ ಬರಲಿದೆ. ಅತ್ಯಂತ ಪಾರದರ್ಶಕವಾಗಿ ಈ ಪ್ರಕ್ರಿಯೆ ನಡೆಯಲಿದೆ. ಮರಳು ಗುತ್ತಿಗೆದಾರರ ಮತ್ತು ಮರಳು ಸಾಗಾಟ ಮಾಡುವ ವಾಹನಗಳ ನೊಂದಣಿ ಸಹ ಆಪ್ನಲ್ಲಿ ನಡೆಯಲಿದೆ ಎಂದು ಡಿಸಿ ಹೇಳಿದರು.