ಬೆಂಗಳೂರು ಡಿ 11: ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಬಂಧಿತನಾಗಿರುವ ಪತ್ರಕರ್ತ ರವಿ ಬೆಳಗೆರೆ ಅವರ ವಿಚಾರಣೆ ಬಹುತೇಕ ಪೂರ್ಣಗೊಂಡಿದ್ದು , ಡಿ 11 ರ ಸೋಮವಾರ ಸಂಜೆ ವೇಳೆಗೆ ಸಿಸಿಬಿ ಪೊಲೀಸರು ನ್ಯಾಯಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ. ಇನ್ನು ಬೆಳಗರೆ ಅವರ ವಕೀಲರು, ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಅವರು ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.
ರವಿ ಬೆಳಗೆರೆ ಅವರನ್ನು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಅವರು ಬಿ.ಪಿ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವುದರಿಂದ ಅನಾರೋಗ್ಯದ ಕಾರಣ ನೀಡಿ ಅವರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಬಹುದು.
'ಬಂಧನಕ್ಕೆ ಸಂಬಂಧಪಟ್ಟ ಕೆಲ ದಾಖಲೆಗಳು ನಮ್ಮ ಕೈಸೇರಿಲ್ಲ. ಇಂದು ಸಂಜೆ ವೇಳೆಗೆ ದಾಖಲೆಗಳು ಕೈ ಸೇರಿದರೆ ಜಾಮೀನಿಗೆ ಅರ್ಜಿಸಲ್ಲಿಸಲಾಗುವುದು' ಎಂದು ರವಿ ಬೆಳಗೆರೆ ಪರ ವಕೀಲ ದಿವಾಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಈ ನಡುವೆ ರವಿ ಬೆಳಗರೆ ಅವರ ಎರಡನೇ ಪತ್ನಿ ಯಶೋಮತಿ ಅವರ ಮನೆಗೂ ಸಿಸಿಬಿ ಅಧಿಕಾರಿಗಳು ತೆರಳಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ತಮಗೂ ಹಾಗೂ ಸುನೀಲ್ ಹೆಗ್ಗರವಳ್ಳಿಗೂ ಕಚೇರಿ ಹಾಗೂ ವೃತ್ತಿಪರ ಗೆಳೆತನ ಬಿಟ್ಟರೆ ಬೇರೆ ಯಾವ ರೀತಿಯ ಸಂಬಂಧವೂ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.