ಪುತ್ತೂರು, ಜೂ 05 (Daijiworld News/MSP): ಸಹಪಾಠಿ ವಿದ್ಯಾರ್ಥಿನಿ ಮೇಲೆ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣದ ಇನ್ನು ಹಸಿರಾಗಿರುವಾಗಲೇ ಅಪ್ರಾಪ್ತ ಬಾಲಕಿ (15) ಮೇಲೆ ಅತ್ಯಾಚಾರ ಯತ್ನ ಪ್ರಕರಣ ನಡೆದಿದ್ದು ಇದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಪುತ್ತೂರಿನ ಪಾಪೆಮಜಲು ಎಂಬಲ್ಲಿ ಈ ಘಟನೆ ನಡೆದಿದ್ದು ಅದೇ ಪರಿಸರದ ನಿವಾಸಿ ವಿವಾಹಿತ ಅಜಿತ್ (28) ಎಂಬಾತ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಬಾಲಕಿ ಶಾಲೆಗೆ ಹೋಗುವ ಸಮಯ ಪಳನಿರು ಎಂಬಲ್ಲಿ ಬಂದ ಅಜಿತ್ ಸಂತ್ರಸ್ತೆಯ ತಾಯಿ ಸುಸ್ತಾಗಿ ಗುಡ್ಡೆಯಲ್ಲಿ ಬಿದ್ದಿದ್ದಾರೆ ಎಂದು ತಿಳಿಸಿ ಬೇಗ ಬಾ ಎಂದು ನಿರ್ಜನ ಪ್ರದೇಶಕ್ಕೆ ಕೈ ಹಿಡಿದು ಎಳೆದು ದೈಹಿಕ ಕಿರುಕುಳ ನೀಡಲಾರಂಭಿಸಿದ್ದ. ಗಾಬರಿಗೊಳಗಾದ ಬಾಲಕಿ ಪ್ರಜ್ಞೆ ತಪ್ಪಿ ಬಿದ್ದರೂ ಅತ್ಯಾಚಾರ ಎಸಗಿದ್ದ. ಪ್ರಜ್ಞೆ ಮರುಕಳಿಸಿದಾಗ ಆರೋಪಿ ಪರಾರಿಯಾಗಿದ್ದು, ಘಟನೆಯಿಂದ ಮಾನಸಿಕವಾಗಿ ಜರ್ಜರಿತಳಾದ ಆಕೆ ಪೋಷಕರಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಯನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ.
ಘಟನೆ ಕುರಿತು ಸಂಪ್ಯಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಜಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.