Karavali
ಕಾರ್ಕಳ : ಸಕಲ ಸರಕಾರಿ ಗೌರವದೊಂದಿಗೆ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಅಂತ್ಯಕ್ರಿಯೆ
- Fri, Jul 05 2019 05:37:09 PM
-
ಕಾರ್ಕಳ, ಜೂ 05 (Daijiworld News/MSP): ಸಕಲ ಸರಕಾರಿ ಗೌರವಗಳೊಂದಿಗೆ ಸರಳ, ಸಜ್ಜನ, ದಕ್ಷ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಅಜಾತಶತ್ರು, ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಹುತ್ತುರ್ಕೆ ಗೋಪಾಲ ಭಂಡಾರಿ ಅವರ ಅಂತ್ಯ ಕ್ರಿಯೆಯು ಹುಟ್ಟೂರು ಆಗಿರುವ ಹೆಬ್ರಿಯ ಹುತ್ತುರ್ಕೆಯಲ್ಲಿ ಶುಕ್ರವಾರ ನೆರವೇರಿತು.
ಬೆಂಗಳೂರಿನಿಂದ ಮಂಗಳೂರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ವೋಲ್ವೋ ಬಸ್ಸಿನಲ್ಲಿ ಬರುತ್ತಿರುವಾಗ ಹೃದಯಾಘಾತಕ್ಕೀಡಾಗಿ ಕೊನೆ ಉಸಿರೆಳೆದಿದ್ದರು. ಅವರ ಪಾರ್ಥೀವ ಶರೀರವನ್ನು ವೆನ್ಲಾಕ್ ಆಸ್ಪತ್ರೆಯಿಂದ ಶುಕ್ರವಾರ ಬೆಳಿಗ್ಗೆ 10.30ರ ವೇಳೆಗೆ ಅಂಬುಲೆನ್ಸ್ ಮೂಲಕ ಅವರ ಸ್ವಕ್ಷೇತ್ರ ಕಾರ್ಕಳಕ್ಕೆ ತಂದು ಕಾರ್ಕಳ ಕಿಸಾನ್ ಸಭಾ ಟ್ರಸ್ಟ್ನಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಹಲವಾರು ರಾಜಕರಣಿಗಳು, ಧಾರ್ಮಿಕ ಮುಖಂಡರು, ಶೈಕ್ಷಣಿಕ ಕ್ಷೇತ್ರಗಳ ಮುಖಂಡರು, ಅಭಿಮಾನಿಗಳು ಅಂತಿಮ ದರ್ಶನ ಪಡೆದರು. ಅಜಾತ ಶತ್ರು ಎಂದೇ ಗುರುತಿಸಿಕೊಂಡಿರುವ ಇವರ ಅಂತಿಮ ದರ್ಶನಕ್ಕಾಗಿ ವಿವಿಧ ಪಕ್ಷಗಳ ಕಾರ್ಯಕರ್ತರು,ವಿದ್ಯಾರ್ಥಿಗಳು, ಸರಕಾರಿ ನೌಕರರು, ಅಧಿಕಾರಿ ವರ್ಗದವರು ಸರದಿಸಾಲಿನಲ್ಲಿ ನಿಂತು ಅಂತಿಮ ದರ್ಶನ ಪಡೆದಿರುವುದು ಅವರ ಸದ್ಗುಣಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಗೌರವಾರ್ಥವಾಗಿ ವ್ಯಾಪಾರ ಮಳಿಗೆ ಬಂದ್
ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿಯವರ ಪಾರ್ಥಿವ ಶರೀರವನ್ನು ಕಾರ್ಕಳಕ್ಕೆ ತರುತ್ತಿದ್ದಂತೆ ಕಾರ್ಕಳದ ವರ್ತಕರು ತಮ್ಮ ಅಂಗಡಿ ಮಳಿಗೆಗಳನ್ನು ಮುಚ್ಚಿ ಸ್ವಯಂಘೋಷಿತ ಬಂದ್ ನಡೆಸಿ ಗೌರವ ಸಲ್ಲಿಸುವುದರೊಂದಿಗೆ ಕಿಸಾನ್ ಸಭಾದಲ್ಲಿ ಅವರ ಅಂತಿಮ ದರ್ಶನ ಪಡೆದರು.ಬಿಗು ಭದ್ರತೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಯಿತು. ಕಿಸಾನ್ ಸಭಾಕ್ಕೆ ತೆರಳುವ ರಸ್ತೆಯಲ್ಲಿ ವಾಹನ ಮುಕ್ತಗೊಳಿಸಿ ನಾಗರಿಕರು ಅಂತಿಮ ದರ್ಶನ ಪಡೆಯುವುದಕ್ಕಾಗಿ ಅವಕಾಶ ಕಲ್ಪಿಸಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ನಾಗರಿಕರನ್ನು ಯಾವುದೇ ನೂಕುನುಗ್ಗಲಿಲ್ಲದೇ ಅಂತಿಮ ದರ್ಶನ ಪಡೆಯಲು ಅವಕಾಶ ಒದಗಿಸುವಲ್ಲಿ ಪೊಲೀಸರು ಯಶಸ್ಸು ಕಂಡಿದ್ದಾರೆ.ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಸಚಿವೆ ಜಯಮಾಲ, ಶಾಸಕ ಸುನೀಲ್ಕುಮಾರ್, ಮಾಜಿ ಸಚಿವರಾದ ಯು.ಆರ್. ಸಭಾಪತಿ, ಪ್ರಮೋದ್ ಮಧ್ವರಾಜ್, ವಿನಯಕುಮಾರ್ ಸೊರಕೆ, ಅಮರನಾಥ ಶೆಟ್ಟಿ, ಅಭಯಚಂದ್ರ ಜೈನ್, ತಾಲೂಕು ಪಂಚಾಯತ್ ಅಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಉದಯ ಎಸ್.ಕೋಟ್ಯಾನ್, ದಿವ್ಯಶ್ರೀ ಅಮೀನ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಅಂತೋನಿ ಡಿಸೋಜಾ ನಕ್ರೆ, ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಅಜೆಕಾರು, ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅವಿಲಿನ್ ಲೂಯಿಸ್, ಕೆಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹಮ್ಮದ್, ವರ್ತಕರ ಸಂಘದ ಅಧ್ಯಕ್ಷ ಕೆ.ಪಿ ಶೆಣೈ, ಉಡುಪಿ ಜಿಲ್ಲಾ ಮುಸ್ಲಿ ಒಕ್ಕೂಟದ ಕಾರ್ಕಳ ತಾಲೂಕು ಅಧ್ಯಕ್ಷ ಮಹಮ್ಮದ್ ಗೌಸ್, ಮಂಗಳೂರು ಕಾರ್ಪೋರೇಟರ್ ಶಶಿಧರ್ ಹೆಗ್ಡೆ, ಎಂ.ಎ.ಗಫೂರ್, ಸಹಕಾರಿ ಮುಖಂಡರಾದ ಬೆಳಪು ದೇವಿ ಪ್ರಸಾದ್, ಇರ್ವತ್ತೂರು ಭಾಸ್ಕರ್ ಕೋಟ್ಯಾನ್, ಬಿಜೆಪಿ ಮುಖಂಡರಾದ ಮಹಾವೀರ್ ಹೆಗ್ಡೆ, ಜಯರಾಮ ಸಲ್ಯಾನ್, ಉಡುಪಿ ಧರ್ಮಧ್ಯಕ್ಷ ವಂದನೀಯ ಜೆರಾಲ್ಡ್ ಐಸಾಕ್ ಲೋಬೋ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾ ಅಧ್ಯಕ್ಷ ವಂದನೀಯ ಜಾರ್ಜ್ ಡಿಸೋಜಾ, ಕಾರ್ಕಳ ವಲಯಧ್ಯಕ್ಷ ವಂದನೀಯ ಜೋಸ್ವಿ ಫೆರ್ನಾಂಡಿಸ್, ಹಿರ್ಗಾನ ಮರಿಯ ಗೋರೆಟಿ ಚರ್ಚ್ನ ಧರ್ಮಗುರು ವಂದನೀಯ ರೋಶನ್, ಬಲ್ಲೊಟ್ಟು ಮಠದ ಶ್ರೀ ಶ್ರೀ ಶ್ರೀ ವಿಖ್ಯಾತನಂದ ಸ್ವಾಮಿ, ಬಜರಂಗದಳ ರಾಜ್ಯ ಸಂಚಾಲಕ ಕೆ.ಆರ್.ಸುನೀಲ್ ಮೊದಲಾದವರು ಅಂತಿಮ ದರ್ಶನ ಪಡೆದವರಲ್ಲಿ ಪ್ರಮುಖರಾಗಿದ್ದಾರೆ.
ಕಣ್ಣೀರು ಹಾಕಿದ ಶಾಸಕ ಸುನೀಲ್ಕುಮಾರ್
ಕಳೆದ ಮೂವತ್ತು ವರ್ಷಗಳಿಂದ ಹಂತ ಹಂತವಾಗಿ ರಾಜಕೀಯ ಮೆಟ್ಟಲೇರಿ, ಶಾಸಕನ ವರೆಗೆ ಅಧಿಕಾರ ಕಂಡವರು. ಸರಳ, ಸಜ್ಜನಿಕೆ, ಸ್ವಚ್ಚ ರಾಜಕರಣಿಯಾಗಿ ಮೆರೆದ ಎಚ್.ಗೋಪಾಲ ಭಂಡಾರಿಯವರ ಅಕಾಲಿನ ನಿಧನವು ತುಂಬಾ ನೋವು ಉಂಟುಮಾಡಿದೆ. ಬಡ ಕುಂಟುಂಬದಲ್ಲಿ ಜನಿಸಿ ಯಾವುದೇ ರಾಜಕೀಯ ಹಿನ್ನಲೆ ಇಲ್ಲದೇ ಇಷ್ಟೊಂದು ಉನ್ನತ್ತ ಸ್ಥಾನಕ್ಕೇರಲು ಅವರ ವರ್ಚಸ್ಸು ಕಾರಣವಾಗಿದೆ ಎಂದು ಹೇಳಿ ಕಣ್ಣೀರು ಮೂಲಕ ಅಂತರಂಗದ ನೋವನ್ನು ಹೊರ ಹಾಕಿದರು.ಸರ್ವರ ಕಷ್ಟಗಳಿಗೆ ಸ್ಪಂದಿಸುತ್ತಿದ್ದರು -ಉಡುಪಿ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೋ
ಬಡ ನಿರ್ಗತಿಕರ ಕಷ್ಟ ನೋವುಗಳಿಗೆ ಸ್ಪಂದಿಸುತ್ತಿದ್ದ ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿ ಅವರು ತನ್ನ ಜೀವನವನ್ನೇ ತನ್ನ ಊರು ಹಾಗೂ ಬಡಜನರ ಸೇವೆಗೆ ಮುಡಿಪಾಗಿಟ್ಟಿದ್ದರು. ಇವರ ಅಕಾಲಿಕ ನಿಧನವು ತುಂಬ ನೋವು ತಂದಿದೆ.ಜನರ ಒಳಿತಿಗೆ ಮುಂದಾಗಿದ್ದರು -ಎಚ್.ವೀರಪ್ಪ ಮೊಯಿಲಿ ಮಾಜಿ ಮುಖ್ಯ ಮಂತ್ರಿ
ಸಕ್ರಿಯಾ ಸಮಾಜಿಕ ಕಾರ್ಯಕರ್ತರಾಗಿದ್ದು, ಜನರ ಒಳಿತಿಗಾಗಿ ಕೆಲಸ ಮಾಡುತ್ತಿದ್ದ ಅವರೊಬ್ಬರು ಅಜಾತಶತ್ರುವಾಗಿ ಮೆರೆದಿದ್ದರು. ಪಕ್ಷದ ಸಿದ್ದಾಂತಗಳಿಗೆ ಸದಾ ಬೆಲೆ ನೀಡುತ್ತಾ ಬಂದಿದ್ದ ಪ್ರಮಾಣಿಕ ವ್ಯಕ್ತಿಯಾಗಿ ಸಮಾಜಕ್ಕೆ ಗುರುತಿಸಿದ್ದಾರೆ. ತನ್ನೊಂದಿಗೆ ಅನ್ಯೋನ್ಯವಾಗಿದ್ದ ಅವರು ನನ್ನ ಆರು ಬಾರಿಯ ಗೆಲುವಿನ ಬೆನ್ನೆಲುಬಾಗಿ ಅವರು ಇದ್ದರು.ರಾಜಕಾರಣದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ಕಂಡಿದ್ದೇನೆ -ಸಚಿವೆ ಜಯಮಾಲ
ರಾಜಕಾರಣದಲ್ಲಿ ಸರಳ,ಸಜ್ಜನ,ಸ್ವಚ್ಚ ನಡೆ ನುಡಿಯ ಶೇಷ್ಠ ವ್ಯಕ್ತಿಯಾಗಿ ಗೋಪಾಲಭಂಡಾರಿ ಅವರನ್ನು ಕಂಡಿದ್ದೇನೆ.ಹೋರಾಟದ ಮೂಲಕ ಜನರಿಗೆ ನ್ಯಾಯ ಒದಗಿಸುವ ಕೆಲಸವನ್ನು ಅವರು ನಡೆಸಿದ್ದಾರೆ.
ಅಘಾತದಿಂದ ಇನ್ನೂ ಹೊರಬಂದಿಲ್ಲ -ಉದಯಕುಮಾರ್ ಶೆಟ್ಟಿ ಮುನಿಯಾಲು
ಗೋಪಾಲಭಂಡಾರಿಯವರು ಅಕಾಲಿಕ ನಿಧನದ ಸುದ್ದಿ ತಿಳಿದು ಅಘಾತಕ್ಕೊಳಗಾಗಿದ್ದೇನೆ. ಬಾಲ್ಯದಿಂದಲೂ ಇವರೊಂದಿಗೆ ಅವಿನಾಭಾವ ಸಂಬಂಧವನ್ನು ಇಟ್ಟುಕೊಂಡಿದ್ದೇನೆ. ಮಗುವಿನಂತಹ ಮುಗ್ದ ಮನಸ್ಸಿನವರಾಗಿದ್ದರು. ಇಂತಹ ವ್ಯಕ್ತಿ ರಾಜಕೀಯದಲ್ಲಿ ಇರುವುದು ಅಪರೂಪ.