ಮಂಗಳೂರು ಡಿ 11 : ಸಮಾಜ ಸೇವೆಯ ಕಾರ್ಯಗಳಿಂದ ಗುರುತಿಸಿಕೊಂಡಿದ್ದ ಬಿರುವೆರ್ ಕುಡ್ಲ ಸಂಘಟನೆಯ ನೂತನ ಮಹಿಳಾ ವೇದಿಕೆ, ಡಿ 10ರ ಭಾನುವಾರ ಕೋಡಿಯಲ್ ಬೈಲ್ ಭಗವತಿ ಕ್ಷೇತ್ರದ ಶ್ರೀ ಕೂಟಕ್ಕಳ ಆಡಿಟೋರಿಯಂ ನಲ್ಲಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೇಯರ್ ಕವಿತಾ ಸನಿಲ್ ಸಂಘಟನೆಯ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ. ಇದೀಗ ಬಿರುವೆರ್ ಕುಡ್ಲ ಸಂಘಟನೆಯ ಮಹಿಳಾ ವೇದಿಕೆಯೂ ಪ್ರಾರಂಭಗೊಂಡು ಅದೇ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವುದು ಅಭಿನಂದನೀಯ ಎಂದರು. ಬಳಿಕ ಮಾತನಾಡಿದ ವರ್ಕಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ, ಇಂದು ಮಹಿಳೆಯರು ಪುರುಷರಿಗಿಂತ ಹೆಚ್ಚಿನ ವಿದ್ಯಾಭಾಸ ಪಡೆದು, ಎಲ್ಲಾ ದೃಷ್ಟಿಕೋನದಲ್ಲೂ ಸಮಾಜದ ಮುಂಚೂಣಿಯಲ್ಲಿದ್ದಾರೆ. ಹೆಣ್ಣೊಂದು ಕಲಿತರೆ ಮನೆಯೊಂದು ಬೆಳಗುವಂತೆ , ಮಹಿಳೆಯೋರ್ವಳು ಮನಸ್ಸು ಮಾಡಿ ಸಮಾಜ ಸೇವೆಗೆ ಒಂದಿಷ್ಟು ಸಮಾಜ ಸೇವೆಗೆಂದು ಸಮಯ ಮೀಸಲಿಟ್ಟರೆ ಅಂತಹ ಸಮಾಜದಲ್ಲಿ ಬಡತನ, ಅನಕ್ಷರತೆ, ಮುಂತಾದ ಸಾಮಾಜಿಕ ಪಿಡುಗುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುವುದು. ಈಗಾಗಲೇ ಹಲವು ವೈದ್ಯಕೀಯ ನೆರವುಗಳನ್ನು ನೀಡಿ ಅನೇಕರಿಗೆ ನೇರವಾದ ಈ ಸೇವೆ ಹೀಗೆ ಮುಂದುವರಿಯಲಿ ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ, ರೋಶನಿ ನಿಲಯದ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ| ರಮೀಳಾ ಶೇಖರ್ ಮಾತನಾಡಿ ಕಚೇರಿ ಹಾಗೂ ಮನೆಕೆಲಸಗಳ ಮದ್ಯೆ ಮಹಿಳೆ ತನ್ನ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಮುಖ್ಯ. ಉದ್ಯೋಗಸ್ಥ ಮಹಿಳೆಯರೇ ಈ ಕಾಲಘಟ್ಟದಲ್ಲಿ ಹೆಚ್ಚಾಗಿರುವ ಸಂದರ್ಭದಲ್ಲಿ ಸಮಾಜ ಸೇವೆಗೆಂದು ಒಂದಿಷ್ಟು ಸಮಯ ಮೀಸಲಿಟ್ಟ ಬಿರುವೆರ್ ಕುಡ್ಲದ ಮಹಿಳಾ ವೇದಿಕೆ ನಿಜಕ್ಕೂ ಅಭಿನಂದನೀಯ ಎಂದರು. ಬಳಿಕ ನೂತನ ಪದಾಧಿಕಾರಿಗಳಿಗೆ ಬಿರುವೆರ್ ಕುಡ್ಲದ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಲ್ಲಾಳ್ ಭಾಗ್ ಪ್ರಮಾಣ ವಚನ ಭೋದಿಸಿದರು. ಇದೇ ವೇಳೆ ಮುಖದ ಅಂಗವಿಕಲತೆಯಿಂದ ಬಳಲುತ್ತಿದ್ದ ಸಸಿಹಿತ್ಲುವಿನ ರಕ್ಷಿತಾ ಎನ್ನುವ ಯುವತಿಗೆ ಆರ್ಥಿಕ ವೈದ್ಯಕೀಯ ನೆರವು ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಬಿಜೆಪಿಯ ವೇದವ್ಯಾಸ್ ಕಾಮತ್, ಮಹಿಳಾ ವೇದಿಕೆಯ ಅಧ್ಯಕ್ಷರಾದ ವಿದ್ಯಾರಾಕೇಶ್ ಮುಂತಾದವರು ಉಪಸ್ಥಿತರಿದ್ದರು.